Sidlaghatta: ಶಿಡ್ಲಘಟ್ಟ ನಗರದ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಮಂಗಳವಾರ ಕನ್ನಡದಲ್ಲಿ ಸೇವೆ ನೀಡುವಂತೆ ಕರವೇ ವತಿಯಿಂದ ಮನವಿ ಸಲ್ಲಿಸಿ ಕರವೇ ಯುವ ಘಟಕದ ಅಧ್ಯಕ್ಷ ನಾಗರಾಜ್ ಮಾತನಾಡಿದರು.
ಪ್ರತಿವರ್ಷ ಸೆಪ್ಟೆಂಬರ್ 14 ರಂದು ಭಾರತ ಒಕ್ಕೂಟದ ಸರ್ಕಾರವು ಜನರ ತೆರಿಗೆ ಹಣದಲ್ಲಿ “ಹಿಂದಿ ದಿವಸ್” ಆಚರಣೆ ನಡೆಸುತ್ತಾ ಬಂದಿದ್ದಾರೆ. ಕೇವಲ ಹಿಂದಿ ದಿವಸವೊಂದನ್ನು ಆಚರಿಸುವ ಮೂಲಕ ದೇಶದ ಎಲ್ಲ ಭಾಷೆಗಳನ್ನು ಕಡೆಗಣಿಸಿ ಹಿಂದಿ ಭಾಷೆಯನ್ನ ಮಾತ್ರ ಮೆರೆಸುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಇದನ್ನು ಕಳೆದ ಇಪ್ಪತ್ತು ವರ್ಷಗಳಿಂದ ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದೇವೆ. ಎಲ್ಲ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್ ಗಳಿಗೆ ತೆರಳಿ ಕನ್ನಡದಲ್ಲಿ ವ್ಯವಹರಿಸಲು ಮನವಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ನಗರದ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಮತ್ತು ಎಸ್ ಬಿ ಐ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ನೀಡದೆ, ಗ್ರಾಹಕರಿಗೆ ಹಿಂದಿ ಭಾಷೆಯಲ್ಲಿ ಮಾತನಾಡಲು ಒತ್ತಾಯಿಸುವಂತಹ ಅನೇಕ ಪ್ರಕರಣಗಳು ಇತ್ತೀಚಿನ ದಿನದಲ್ಲಿ ಕೇಳಿಬರುತ್ತಿವೆ. ಗ್ರಾಹಕರ ಮೇಲೆ ಹಿಂದಿ ಹೇರಿಕೆ ಹಾಗೂ ಗ್ರಾಹಕರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತಿದೆ ಎಂದರು.
ಬ್ಯಾಂಕಿನಲ್ಲಿ ಎಲ್ಲಾ ಸೇವೆಗಳು ಕನ್ನಡದಲ್ಲೇ ನೀಡಬೇಕು. ಗ್ರಾಹಕರಿಗೆ ಸುಲಭವಾಗುವಂತೆ ಕರ್ನಾಟಕದವರಾಗಿ ಕನ್ನಡ ಮಾತನಾಡುವವರನ್ನ ಬ್ಯಾಂಕಿನ ಉದ್ಯೋಗಿಗಳನ್ನಾಗಿ ನೇಮಿಸಬೇಕು. ಕನ್ನಡ ಬಾರದ ಸಿಬ್ಬಂದಿಗಳನ್ನು ಈ ಕೂಡಲೇ ಅವರವರ ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು. ಬ್ಯಾಂಕಿನ ನಾಮಫಲಕ, ಸೂಚನಾ ಫಲಕಗಳನ್ನು ಶೇಕಡಾ 60 ರಷ್ಟು ಭಾಗ ಕನ್ನಡ ಭಾಷೆಯನ್ನೇ ಅಳವಡಿಸಬೇಕು ಎಂದರು.
ಬ್ಯಾಂಕುಗಳಲ್ಲಿ ಚಲನ್ ಗಳು, ಖಾತೆ ಪುಸ್ತಕ, ಚೆಕ್ ಮತ್ತು ಎಲ್ಲಾ ಅರ್ಜಿ ನಮೂನೆಗಳೂ ಕನ್ನಡದಲ್ಲಿ ವ್ಯವಹರಿಸಲು ಅನುಕೂಲವಾಗುವ ರೀತಿ ನೋಡಿಕೊಳ್ಳಬೇಕು. ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾ ಇತ್ಯಾದಿ ಭಾಷಾ ಒಕ್ಕೂಟ ವಿರೋಧಿ ಆಚರಣೆಗಳನ್ನು ಕೂಡಲೇ ನಿಲ್ಲಿಸಬೇಕು. ಇನ್ನು ಮುಂದೆ ಯಾವುದೇ ತರಹದ ಆಚರಣೆಗಳು ಬ್ಯಾಂಕಿನಲ್ಲಿ ನಡೆಯದಂತೆ ಎಚ್ಚರ ವಹಿಸಿ ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಅಖೀಲ್ ಖಾನ್, ನಿಯಮತ್ ಉಲ್ಲಾ, ಆಜಮ್ ಉಲ್ಲಾ ಹಾಜರಿದ್ದರು.