Sidlaghatta : ಕುರಿ, ಮೇಕೆ, ಎತ್ತು, ಎಮ್ಮೆ, ಸೀಮೆ ಹಸುಗಳ ಸಾಕಣೆದಾರ ರೈತರು (Livestock Farmers) , ಹೈನುಗಾರರು ಹಾಗೂ ಪಶು ವೈದ್ಯಕೀಯ ಇಲಾಖೆಯ ವೈದ್ಯರು (Department of Animal Husbandry & Veterinary Services), ಸಹಾಯಕ ನಿರ್ದೇಶಕರನ್ನೊಳಗೊಂಡ WhatsApp Group ಗಳನ್ನು ರಚಿಸಿ ಗ್ರೂಪ್‌ಗಳಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವ ಕೆಲಸ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರಾರಂಭವಾಗಿದೆ.
ಗುಂಪಿನಲ್ಲಿ ಕುರಿ, ಮೇಕೆ, ಎತ್ತು, ಎಮ್ಮೆ, ಸೀಮೆ ಹಸುಗಳಿಗೆ ತಗಲುವ ರೋಗಗಳು, ರೋಗ ನಿವಾರಣೆಗೆ ಕೈಗೊಳ್ಳಬೇಕಾದ ಆರಂಭಿಕ ಕ್ರಮಗಳು, ಪಶು ವೈದ್ಯಕೀಯ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಹೈನುಗಾರರು, ಕುರಿ ಮೇಕೆ ಸಾಕಣೆದಾರರಿಗೆ ಮಾಹಿತಿ ಸಲಹೆ ಸೂಚನೆ ಸಿಗಲಿದೆ.
ಶಿಡ್ಲಘಟ್ಟ ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ 10 ಮಂದಿ ಕುರಿ ಮೇಕೆ ಸಾಕಣೆದಾರರು, 10 ಮಂದಿ ಸೀಮೆ ಹಸು ಎಮ್ಮೆಗಳ ಸಾಕಣೆದಾರರ WhatsApp ಗ್ರೂಪ್ ರಚಿಸಿದ್ದು, ಆ ಗ್ರೂಪ್‌ನಲ್ಲಿ ಆ ವ್ಯಾಪ್ತಿಯ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯರು ಹಾಗೂ ತಾಲ್ಲೂಕು ಸಹಾಯಕ ನಿರ್ದೇಶಕ ಸಹ ಇರುತ್ತಾರೆ.
ಪಶು ವೈದ್ಯಕೀಯ ಇಲಾಖೆಯ ಶಿಡ್ಲಘಟ್ಟ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ರಮೇಶ್ ಅವರು ವೈಯಕ್ತಿಕವಾಗಿ ಆಸಕ್ತಿ ವಹಿಸಿದ್ದು ತಾಲ್ಲೂಕಿನಲ್ಲಿನ ಎಲ್ಲ ಹಳ್ಳಿಗಳಿಂದಲೂ ತಲಾ 20 ರೈತರನ್ನು ಆಯ್ಕೆ ಮಾಡಿಕೊಂಡು ವ್ಯಾಟ್ಸಾಪ್ ಗುಂಪುಗಳನ್ನು ರಚಿಸತೊಡಗಿದ್ದಾರೆ.
ಮೊದಲ ಹಂತದಲ್ಲಿ 100 ಹಳ್ಳಿಗಳಲ್ಲಿನ ರೈತರ ಪಟ್ಟಿ ಸಿದ್ದವಾಗಿದ್ದು, ಗುಂಪು ರಚನೆ ಕಾರ‍್ಯ ಪ್ರಗತಿಯಲ್ಲಿದೆ. ಉಳಿದ ಎಲ್ಲ ಹಳ್ಳಿಗಳ ರೈತರ ಗುಂಪು ರಚನೆ ಕಾರ‍್ಯ ಪೂರ್ಣಗೊಂಡ ಮೇಲೆ ಪ್ರತಿ ಹಳ್ಳಿಯಿಂದಲೂ ಗುಂಪಿನಲ್ಲಿರುವ ಇಬ್ಬರು ರೈತರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಲು ತಯಾರಿಗಳು ನಡೆದಿವೆ.
ರಾಸುಗಳಿಗೆ ತಗಲುವ ರೋಗಗಳು, ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೆ ಕೈಗೊಳ್ಳಬೇಕಾದ ಅರಂಭಿಕ ಕ್ರಮಗಳು, ಪ್ರಾಥಮಿಕ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಿ ಅವರಿಗೆ ಔಷಧ, ತಪಾಸಣಾ ಪರಿಕರಗಳ ಕಿಟ್ ನೀಡಲು ಉದ್ದೇಶಿಸಿದ್ದಾರೆ.
ರಾಸುಗಳಲ್ಲಿ ರೋಗಗಳು, ಸಮಸ್ಯೆ ಕಾಣಿಸಿಕೊಂಡ ತಕ್ಷಣವೇ ಪಶು ವೈದ್ಯರು ಸಕಾಲಕ್ಕೆ ಸಂಪರ್ಕಕ್ಕೆ ಸಿಗದಿರಬಹುದು, ಔಷದೋಪಚಾರ ತಡವಾಗಬಹುದು, ಈ ಸಮಯದಲ್ಲಿ ಗುಂಪಿನಲ್ಲಿರುವ ತರಬೇತಿ ಪಡೆದ ರೈತರನ್ನು ಸಂಪರ್ಕಿಸಿ ಅವರಿಂದ ಸಲಹೆ ಸೂಚನೆ ಹಾಗೂ ಆರಂಭಿಕ ಚಿಕಿತ್ಸೆಯನ್ನು ಪಡೆದುಕೊಳ್ಳಲು ಈ ಗುಂಪು ನೆರವಾಗಲಿದೆ.
ಜತೆಗೆ ತರಬೇತಿ ಪಡೆದ ರೈತರು ಅದೇ ಗ್ರಾಮದವರು ಆಗಿರುವುದರಿಂದ ತಕ್ಷಣಕ್ಕೆ ಅವರು ಸಂಪರ್ಕಕ್ಕೆ ಸಿಗಲಿದ್ದು ಸಕಾಲಕ್ಕೆ ಪ್ರಾಥಮಿಕ ಚಿಕಿತ್ಸೆ ಸಲಹೆ ಸೂಚನೆ ಸಿಗುವುದರಿಂದ ರಾಸುಗಳಲ್ಲಿ ಕಾಣಿಸಿಕೊಂಡ ರೋಗ ಸಮಸ್ಯೆ ಉಲ್ಬಣಗೊಳ್ಳದಂತೆ ಹಾಗೂ ರಾಸುಗಳ ಸಾವಿನ ಪ್ರಮಾಣವನ್ನು ತಗ್ಗಿಸುವ ಉದ್ದೇಶ ಈ ಗುಂಪುಗಳ ಮೂಲಕ ಈಡೇರಬಹುದೆನ್ನುವ ಉದ್ದೇಶವಿದೆ.