Sidlaghatta : ಸರ್ಕಾರಿ ಅಧಿಕಾರಿಗಳು ಶ್ರದ್ಧೆ ಮತ್ತು ಶಾಂತತೆಯೊಂದಿಗೆ ಕೆಲಸ ಮಾಡಬೇಕು. ಸಾರ್ವಜನಿಕರ ಭಾವನೆಗಳನ್ನು ಅರ್ಥಮಾಡಿಕೊಂಡು, ಅವರ ಸಮಸ್ಯೆಗಳನ್ನು ಶೀಘ್ರವಾಗಿ ಆಲಿಸಿ ಪರಿಹಾರ ನೀಡಲು ಪ್ರಯತ್ನಿಸಬೇಕು,” ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಎಸ್‌ಪಿ ಆಂಟನಿ ಜಾನ್ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಚಿಕ್ಕಬಳ್ಳಾಪುರ ಶಾಖೆಯಿಂದ ಗುರುವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸ್ವೀಕಾರ ಸಭೆಯಲ್ಲಿ ಅವರು ಈ ಮಾತುಗಳನ್ನು ಹೇಳಿದರು.
“ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಅಧಿಕಾರಿಗಳ ಜವಾಬ್ದಾರಿಯ ನಿರ್ವಹಣೆ ಅತ್ಯಂತ ಮುಖ್ಯವಾಗಿದೆ. ಸಾರ್ವಜನಿಕರ ಕೆಲಸವನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಲು ತೊಂದರೆಗಳೇನಿವೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಿ, ಲಿಖಿತವಾಗಿ ಉತ್ತರ ನೀಡಿದಲ್ಲಿ ಅನೇಕ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬಹುದು,” ಎಂದರು.
ಸಮಾಜದಿಂದ ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಾರ್ವಜನಿಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದು, ಪ್ರಶ್ನೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. “ಯಾವುದೇ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ, ಲಂಚದ ಬೇಡಿಕೆ ಅಥವಾ ವಿಳಂಬ ನಡೆದರೆ, ಸಂಬಂಧಪಟ್ಟ ದಾಖಲೆಗಳೊಂದಿಗೆ ನೇರವಾಗಿ ಅಥವಾ ಅಂಚೆ ಮೂಲಕ ಲೋಕಾಯುಕ್ತ ಕಚೇರಿಗೆ ದೂರು ನೀಡಬಹುದು,” ಎಂದು ಅವರು ಸಲಹೆ ನೀಡಿದರು.
“ಮಧ್ಯವರ್ತಿಗಳಲ್ಲಿ ಅವಲಂಬನೆ ಮಾಡದೇ, ನೇರವಾಗಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುವ ಮನೋಭಾವವನ್ನು ಪ್ರತಿಯೊಬ್ಬ ನಾಗರಿಕರೂ ಅಭಿವೃದ್ಧಿಪಡಿಸಬೇಕು,” ಎಂದು ಅವರು ಹೇಳಿದರು.
ಸಭೆಯಲ್ಲಿ ನಾಗರಿಕರಿಂದ ಕಂದಾಯ ಇಲಾಖೆ 27, ಭೂಮಾಪನಾ ಇಲಾಖೆ 4, ಆರೋಗ್ಯ ಇಲಾಖೆ 1, ಅರಣ್ಯ ಇಲಾಖೆ 2, ತಾಲ್ಲೂಕು ಪಂಚಾಯಿತಿ 6 ಮತ್ತು ನಗರಸಭೆ 3 ಅಹವಾಲುಗಳನ್ನು ಒಳಗೊಂಡು ಒಟ್ಟು 43 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ವೀರೇಂದ್ರಕುಮಾರ್, ತಹಸೀಲ್ದಾರ್ ಬಿ.ಎನ್. ಸ್ವಾಮಿ, ನಗರಸಭೆ ಪೌರಾಯುಕ್ತ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.