Sidlaghatta : ರಾಜಕೀಯ ಪ್ರತಿಷ್ಠೆ, ಜಾಗವನ್ನು ಗುರ್ತಿಸುವಲ್ಲಿ ಗೊಂದಲ ಮುಂತಾದ ಕಾರಣಗಳಿಂದ ಹಲವು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಶಿಡ್ಲಘಟ್ಟ ನಗರಸಭೆಯ (City Municipal Council – CMC) ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಫೆಬ್ರವರಿ 3 ರಂದು ಭೂಮಿ ಪೂಜೆ ನೆರವೇರಲಿದೆ. 4.16 ಕೋಟಿ ರೂ ವೆಚ್ಚದಲ್ಲಿ ಶಿಡ್ಲಘಟ್ಟ ನಗರಸಭೆಯ ಭವ್ಯವಾದ ಮೂರಂತಸ್ತಿನ ಕಟ್ಟಡ ತಲೆ ಎತ್ತಲಿದೆ. ಆ ಮೂಲಕ ನಾಗರಿಕರ ವರ್ಷಗಳ ಕನಸು ನನಸಾಗುವ ದಿನಗಳು ಸಮೀಪಿಸುತ್ತಿವೆ.
ರೇಷ್ಮೆನಗರಿ (Silk City) ಶಿಡ್ಲಘಟ್ಟದ ಹೃದಯ ಭಾಗದಲ್ಲಿನ ಹಳೆಯ ಕೆನರಾ ಬ್ಯಾಂಕ್ ಬಳಿ ಇರುವ ನಗರಸಭೆಯ ಖಾಲಿ ನಿವೇಶನದಲ್ಲಿ ಶಿಡ್ಲಘಟ್ಟ ನಗರಸಭೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಲಿದೆ. 4.16 ಕೋಟಿ ರೂಗಳ ವೆಚ್ಚದಲ್ಲಿ ಭವ್ಯವಾದ ಮೂರಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ.
ಬೆಂಗಳೂರಿನ ಶೀಥಲ್ ಕನ್‌ಸ್ಟ್ರಕ್ಷನ್ ಕಂಪನಿಯು ಗುತ್ತಿಗೆ ಪಡೆದಿದ್ದು ಒಂದು ವರ್ಷ ಸಮಯ ನಿಗಪಡಿಸಿ ಗುತ್ತಿಗೆಯನ್ನು ನೀಡಲಾಗಿದೆ. 2023 ರ ಮಾರ್ಚ್ ವೇಳೆಗೆ ಶಿಡ್ಲಘಟ್ಟ ನಗರಸಭೆಯ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಬೇಕಿದೆ.
2.36 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು 1.80 ಕೋಟಿ ರೂ.ಗಳಲ್ಲಿ ಪೀಠೋಪಕರಣಗಳು, ಒಳ ಭಾಗದಲ್ಲಿ ಅಲಂಕಾರ ಇನ್ನಿತರೆ ಕಾಮಗಾರಿ ನಡೆಯಲಿದ್ದು ನಗರೋತ್ಥಾನ-3ನೇ ಹಂತದಲ್ಲಿನ ಅನುದಾನದಲ್ಲಿ ನಗರಸಭೆಯ ನೂತನ ಕಟ್ಟಡಕ್ಕೆ ಅಗತ್ಯವಾದ ಪೂರ್ತಿ ಹಣವನ್ನು ಮೀಸಲಿಡಲಾಗಿದೆ.
ಕೆಳಭಾಗದ ಕಟ್ಟಡದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಆಯುಕ್ತರ ಕಚೇರಿ, ಮೊದಲ ಮಹಡಿಯಲ್ಲಿ ಆಡಳಿತ ಶಾಖೆ, ತಾಂತ್ರಿಕ, ಆರೋಗ್ಯ ಶಾಖೆಗಳು ಇದ್ದರೆ, ಎರಡನೇ ಮಹಡಿ ಕಟ್ಟಡದಲ್ಲಿ ಸಭಾಂಗಣ, ಕಂದಾಯ ಹಾಗೂ ಡೇ ನಲ್ಮ್ ಶಾಖೆ ಕಚೇರಿಗಳಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.
ನಗರ ಹೃದಯ ಭಾಗದಲ್ಲೆ ಕಟ್ಟಡ ನಿರ್ಮಾಣವಾಗಬೇಕಾ ಅಥವಾ ನಗರದ ಹೊರವಲಯದಲ್ಲಿ ಕಟ್ಟಡ ನಿರ್ಮಾಣವಾಗಬೇಕಾ ಎಂಬ ಗೊಂದಲಕ್ಕೆ ಬಿದ್ದು ಹಲವು ವರ್ಷಗಳ ಕಾಲ ಕಟ್ಟಡ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.
ಜತೆಗೆ ಶಾಸಕರು ಒಂದು ಪಕ್ಷವಾದರೆ, ನಗರಸಭೆಯಲ್ಲಿ ಆಡಳಿತ ನಡೆಸುತ್ತಿದ್ದದ್ದು ಬೇರೊಂದು ಪಕ್ಷದವರಾಗಿದ್ದು ಇದು ಸಹ ರಾಜಕೀಯ ಪ್ರತಿಷ್ಠೆಗೆ ಬಿದ್ದು ಕಟ್ಟಡ ಕಾಮಗಾರಿ ಆರಂಭವಾಗುವುದು ನೆನೆಗುದಿಗೆ ಬಿದ್ದತ್ತು. ಅಂತೂ ಹಲವು ವರ್ಷಗಳ ನಂತರ ನಗರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸಮಯ ಕೂಡಿ ಬಂದಿದೆ.
ಪೌರಾಡಳಿತ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಂ.ಟಿ.ಬಿ.ನಾಗರಾಜ್ ಫೆಬ್ರುವರಿ 3 ರಂದು ನಗರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಿದ್ದು, ಶಾಸಕ ವಿ.ಮುನಿಯಪ್ಪ ಅಧ್ಯಕ್ಷತೆಯಲ್ಲಿ ಸಚಿವ ಡಾ.ಕೆ.ಸುಧಾಕರ್, ಸಂಸದ ಎಸ್.ಮುನಿಸ್ವಾಮಿ, ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ಉಪಾಧ್ಯಕ್ಷ ಬಿ.ಅಪ್ಸರ್‌ಪಾಷ ಭಾಗವಹಿಸಲಿದ್ದಾರೆ.