Sidlaghatta : ನವೆಂಬರ್ 11 ರಂದು ವೀರವನಿತೆ ಒನಕೆ ಓಬವ್ವ ಜಯಂತಿ ಹಾಗೂ ನ.18 ರಂದು ದಾಸಶ್ರೇಷ್ಠರಾದ ಶ್ರೀಕನಕ ದಾಸರ ಜಯಂತಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅರ್ಥಪೂರ್ಣವಾಗಿ ಆಚರಿಸೋಣ ಎಂದು ನಾಡ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ಹಾಗೂ ಬಿಇಒ ನರೇಂದ್ರ ಕುಮಾರ್ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಒನಕೆ ಓಬವ್ವ ಹಾಗೂ ಕನಕ ಜಯಂತಿಯ ಪೂರ್ವ ಭಾವಿ ಸಭೆಯಲ್ಲಿ ಜಯಂತಿ ಆಚರಣೆ ಕುರಿತು ಸಮುದಾಯಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಕಾರಿಗಳು ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಮಾತನಾಡಿದರು.
ಒನಕೆ ಓಬವ್ವ ಹಾಗೂ ಕನಕ ಜಯಂತಿಯನ್ನು ಸರಳವಾಗಿ ಆದರೂ ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಮುದಾಯದ ಹಿರಿಯ ಮುಖಂಡರು ಹಾಗೂ ಸಮುದಾಯದ ಸಾಧಕರಿಗೆ ಸನ್ಮಾನ ನೆರವೇರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲ್ಲೂಕು ಕಚೇರಿಯಲ್ಲಿ ಕನಕ ಜಯಂತಿ ಅಚರಣೆ ಮಾಡಿ ನಂತರ ಕನಕ ಭಜನೆ ಮಂದಿರದಲ್ಲಿ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗ ನಡೆಸುವ ಬಗ್ಗೆ ಚರ್ಚಿಸಿ ಒಮ್ಮತಕ್ಕೆ ಬರಲಾಯಿತು.
ಸಭೆಗೆ ಸಾಕಷ್ಟು ಇಲಾಖೆ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾಲ್ಫಿನ್ ನಾಗರಾಜ್ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ವರ್ಷದ ಜಯಂತಿಗೆ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಸಕಾಲಕ್ಕೆ ಬಳಸಿಕೊಳ್ಳದೆ ವಾಪಸ್ ಆಗಿರುವ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಯಿತು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ ಮಾತನಾಡಿ, ಕಳೆದ ಒಂದು ವರ್ಷದಿಂದ ಯಾವುದೆ ಜಯಂತಿ ಕಾರ್ಯಕ್ರಮಗಳಿಗೆ ಸಂಘ ಸಂಸ್ಥೆಗಳ ಮುಖಂಡರಿಗೆ ಮಾಹಿತಿ ಕೊಡುತ್ತಿಲ್ಲ ಆಹ್ವಾನವನ್ನೂ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದ ಸಂಪ್ರದಾಯಗಳಿಗೆ ಕಳೆದೊಂದು ವರ್ಷದಿಂದ ತಿಲಾಂಜಲಿ ಇಟ್ಟ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಶಿರಸ್ತೇದಾರ್ ಅನೀತ, ಹಿಂದುಳಿದ ವರ್ಗಗಳ ವಿಸ್ತರಣಾಕಾರಿ ಬೀರೇಗೌಡ, ರಾಷ್ಟ್ರೀಯ ಹಬ್ಬಗಳ ಆಚರಣಾ ವಿಭಾಗದ ಸ್ವಾತಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ.ನಾಗರಾಜ್, ತಾಲ್ಲೂಕು ಅಧ್ಯಕ್ಷ ಕೆ.ಮಂಜುನಾಥ್, ಕಾರ್ಯದರ್ಶಿ ಎಂ.ರಾಮಾಂಜಿ, ಸಿ.ರಾಮಣ್ಣ, ಮುನಿನಂಜಪ್ಪ, ಎ.ರಾಮಚಂದ್ರಪ್ಪ, ಕನ್ನಪನಹಳ್ಳಿ ಲಕ್ಷ್ಮೀನಾರಾಯಣ್, ಕುದುಪಕುಂಟೆ ನಾರಾಯಣಸ್ವಾಮಿ, ಛಲವಾದಿ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ತ್ಯಾಗರಾಜ್, ಕಸಾಪ ಗೌರವ ಕಾರ್ಯದರ್ಶಿ ಟಿ.ಟಿ.ನರಸಿಂಹಪ್ಪ, ಮಂಜುಳ ಹಾಜರಿದ್ದರು.