Sidlaghatta : ಶಿಡ್ಲಘಟ್ಟ ನಗರದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 353ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಬುಧವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ನಡೆಸುವ ಆರಾಧನಾ ಮಹೋತ್ಸವವು ಮಂಗಳವಾರ ಪ್ರಾರಂಭವಾಯಿತು.
ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಹಸ್ತೋದಕ, ಮಹಾಮಂಗಳಾರತಿ ನಡೆಯಿತು. ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಉತ್ಸವವನ್ನು ನೆರವೇರಿಸಲಾಯಿತು. ಮಂಗಳವಾರ ಸಂಜೆ ಶ್ರೀ ಗಾಯಿತ್ರಿ ಮಹಿಳಾ ಮಂಡಳಿಯವರಿಂದ ಭಕ್ತಿಗೀತೆಗಳು ಹಾಗು ಹರಿಕಥಾ ವಿಧುಷಿ ಬೇಲೂರು ನಾಗಲಕ್ಷ್ಮಿ ತಂಡದವರಿಂದ ಶ್ರೀ ರಾಘವೇಂದ್ರ ವಿಜಯ ಎಂಬ ಹರಿಕಥೆ ಆಯೋಜಿಸಲಾಗಿತ್ತು.
ಬುಧವಾರ ತೀರ್ಥಪ್ರಸಾದ ವಿನಿಯೋಗಿಸಿದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ರಾಯರ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಉತ್ಸವ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ಮೆರವಣಿಗೆ ಹಾದು ಹೋದ ರಸ್ತೆಗಳನ್ನು ಸಾರಿಸಿ ರಂಗವಲ್ಲಿ ಹಾಕಿ ಉತ್ಸವಕ್ಕೆ ಸ್ವಾಗತ ಕೋರಲಾಗಿತ್ತು.
ದೇವಾಲಯದ ಆವರಣದಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ಬ್ರಾಹ್ಮಣ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ಮುಖಂಡರಾದ ಎಂ.ವಾಸುದೇವರಾವ್, ಎನ್.ಶ್ರೀಕಾಂತ್, ಬಿ.ಕೃಷ್ಣಮೂರ್ತಿ, ವಿ.ಕೃಷ್ಣ, ಬಿ.ಆರ್.ನಟರಾಜ್, ಕೆ.ಮಂಜುನಾಥ, ಮಧು, ಎ.ಎಸ್.ಹರೀಶ್, ಹಾಜರಿದ್ದರು.