
Sidlaghatta : ಶಾಂತಿ, ಸೌಹಾರ್ದತೆ ಮತ್ತು ದಾನಧರ್ಮದ ಪಾವಿತ್ರತೆಯನ್ನು ಸಾರುವ ಪವಿತ್ರ ರಂಜಾನ್ ಹಬ್ಬ (ಈದ್ ಉಲ್ ಫಿತರ್) ತಾಲ್ಲೂಕಿನಾದ್ಯಂತ ಮುಸ್ಲಿಂ ಬಾಂಧವರಿಂದ ಶ್ರದ್ಧಾ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಒಂದು ತಿಂಗಳ ಕಾಲ ಉಪವಾಸ ವ್ರತ (ರೋಜಾ) ಪಾಲಿಸಿ, ರಾತ್ರಿ ಸಾಮೂಹಿಕ ಪ್ರಾರ್ಥನೆ (ತರಾವೆ) ಸಲ್ಲಿಸಿದ ಮುಸ್ಲಿಂ ಸಮುದಾಯ, ಸಂಪ್ರದಾಯದಂತೆ ನಗರದ ಜಾಮಿಯಾ ಮಸೀದಿಯಿಂದ ಮೆರವಣಿಗೆಯಲ್ಲಿ ಹೊರಟು ನೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಅಲ್ಲಾಹನ ಕೃಪೆಗೆ ಪ್ರಾರ್ಥಿಸಿದರು.
ಮಿಲಾದ್ ಬಾರ್ ಈದ್ಗಾ ಸಮಿತಿ ವತಿಯಿಂದ ಈ ಪವಿತ್ರ ದಿನದಲ್ಲಿ ಪ್ರಾರ್ಥನೆಗೆ ಆಗಮಿಸಿದ ಮುಸ್ಲಿಂ ಬಾಂಧವರಿಗೆ ನಿಂಬೆಹಣ್ಣಿನ ಜ್ಯೂಸ್ ವಿತರಿಸಲಾಯಿತು. ಅಲ್ಲದೆ, ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರ ಬೆಂಬಲಿಗರು ಕುಡಿಯುವ ನೀರಿನ ಬಾಟಲ್ ಪೂರೈಕೆ ಮಾಡಿದರು, ಇದರಿಂದ ಹಬ್ಬದ ಸೌಹಾರ್ದತೆ ಮತ್ತಷ್ಟು ದೃಢಗೊಂಡಿತು.
ಸಾಮೂಹಿಕ ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ತಮ್ಮ ಪೂಜ್ಯರ ಸಮಾಧಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.