Sidlaghatta : ಶಿಡ್ಲಘಟ್ಟ ನಗರದ ರೇಣುಕಾ ಎಲ್ಲಮ್ಮದೇವಿಯ (Renuka Yellamma Devi) ಹಸಿ ಕರಗವು (Hasi Karaga) ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ರೇಣುಕಾ ಎಲ್ಲಮ್ಮದೇವಿಯ ಕರಗವು ಯುಗಾದಿಯ ದಿನದಂದು ಧ್ವಜಾರೋಹಣದಿಂದ ಆರಂಭವಾಗಿ ಆರು ದಿನಗಳ ಕಾಲ ಅನೇಕ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಯುಗಾದಿಯ ದಿನ ರಾತ್ರಿ ನಡೆದ ಹಸಿಕರಗದ ರಚನೆ ಬಹು ಕಟ್ಟುನಿಟ್ಟಾದ ಹಾಗೂ ಸಂಪ್ರದಾಯಬದ್ಧವಾದ ಕಾರ್ಯ. ಶಾಸ್ತ್ರಬದ್ಧವಾಗಿ ಹಸಿ ಮಣ್ಣಿನಿಂದ ಕರಗವನ್ನು ರೂಪಿಸುವ ಹಕ್ಕು ನಿರ್ದಿಷ್ಟವಾದ ಮನೆತನದವರಿಗೆ ಮಾತ್ರ ಮೀಸಲು.
ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮ್ಲಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸುತ್ತಾರೆ. ಕರಗ ಹೊರುವ ವ್ಯಕ್ತಿ ನವವಧುವಿನಂತೆ ಶೋಭಿಸುತ್ತಾನೆ.
ಅನಂತರ ಶಕ್ತಿಸ್ವರೂಪನಾದ ಆ ವ್ಯಕ್ತಿಗೆ ಧೂಪ ದೀಪಗಳಿಂದ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾದ ಪೂಜೆ ನಡೆಯುತ್ತದೆ. ಅನಂತರ ಹಣೆಗೆ ನಾಮ, ನಡುಪಟ್ಟಿ ಧರಿಸಿ ಕೈಯಲ್ಲಿ ಕತ್ತಿ ಹಿಡಿದ ಅಂಗರಕ್ಷಕರ ತಂಡದ ವೀರಕುಮಾರರ ಕಾವಲಿನಲ್ಲಿ ಕರಗ ಹೊರುವ ವ್ಯಕ್ತಿಯನ್ನು ನಡೆಮಡಿಯೊಂದಿಗೆ ದೇವಸ್ಥಾನಕ್ಕೆ ಕರೆತರುತ್ತಾರೆ. ಅಷ್ಟರಲ್ಲಿ ಅರಿಶಿನ, ಕುಂಕುಮ ಅಚ್ಚಮಲ್ಲಿಗೆ ಹೂವಿನಿಂದ ಅಲಂಕೃತವಾದ ಹಸಿಕರಗ ಸಿದ್ಧವಾಗಿರುತ್ತದೆ. ಕರಗದ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಅಲಂಕಾರವಿದ್ದು ತುದಿಯಿಂದ ಇಳಿಬಿಟ್ಟ ಹೂ ಸರಗಳನ್ನು ಹೊರುವವರ ಭುಜದಿಂದ ಕೆಳಕ್ಕೆ ಮಾಲೆಯಂತೆ ಹರಡಿಕೊಳ್ಳುವ ರೀತಿಯಲ್ಲಿ ಕಟ್ಟಿರುತ್ತಾರೆ.
ಕರಗವನ್ನು ಹೊತ್ತಮೇಲೆ ಮತ್ತೊಮ್ಮೆ ವಿಶೇಷ ಮಂಗಳಾರತಿಯಾದ ನಂತರ ಸ್ತುತಿಪದ್ಯಗಳನ್ನು ಹೇಳುವ ಪೂಜಾರಿ ಹಾಗೂ ವೀರಕುಮಾರರ ರಕ್ಷಣೆಯಲ್ಲಿ ಗುಡಿಯ ಅಂಗಳ ಬಿಟ್ಟ ಕರಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವಕ್ಕೆ ಮತ್ತೆ ಗರ್ಭಗುಡಿ ಪ್ರವೇಶಿಸಿತು. ದಾರಿಯ್ದುದಕ್ಕೂ ಭಕ್ತಾದಿಗಳಿಂದ ಪೂಜೆ ಸೇವೆ ನಡೆಯಿತು. ಓಟಿ ವೃತ್ತದಿಂದ ಕೋಟೆ ಸರ್ಕಲ್‌ವರೆಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
“ಶಕ್ತಿಯ ಆರಾಧನೆ ನಮ್ಮಲ್ಲಿ ಒಂದು ಪ್ರಾಚೀನ ಸಂಪ್ರದಾಯವಾಗಿ ಬೆಳೆದು ಬಂದಿದೆ. ಹೆಣ್ಣು ದೇವತೆಯನ್ನು ಪೂಜಿಸುವ ಸಂದರ್ಭಗಳಲ್ಲೆಲ್ಲಾ ಕುಂಭ, ಕಳಸಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ಇಲ್ಲಿ ಆವೇಶ, ಮೈದುಂಬುವಿಕೆಗಳೂ ಅವಿಭಾಜ್ಯ ಅಂಗಗಳಾಗಿವೆ. ಇನ್ನು ದ್ರೌಪದಿಗೆ ಸಂಬಂಧಿಸಿದಂತೆ ಆಚರಿಸಿಕೊಂಡು ಬರುತ್ತಿರುವ ಕರಗದ ಪೂಜೆಯ ಹಿನ್ನೆಲೆಯಲ್ಲಿ ಆಕೆಯನ್ನು ಶಕ್ತಿಯ ಪ್ರತೀಕವೆಂದು ನಂಬಿರುವುದರಲ್ಲಿ ಅರ್ಥವಿದೆ. ಈ ಸಂಪ್ರದಾಯವನ್ನು ಹಿಂದಿನಿಂದ ವಹ್ನಿಕುಲ ಕ್ಷತ್ರಿಯರು ಆಚರಿಸಿಕೊಂಡು ಬಂದ್ದಿದಾರೆ” ಎಂದು ಕೆ.ವಿ.ನಾರಾಯಣಸ್ವಾಮಿ ತಿಳಿಸಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur