Sidlaghatta : ಶ್ರೀಕೃಷ್ಣನ ಬದುಕೇ ನಮಗೆ ದಾರಿದೀಪ. ಗೀತೆಯ ಮೂಲಕ ನೀಡಿರುವ ಸಂದೇಶ ನಮ್ಮ ಬದುಕನ್ನು ಮುನ್ನಡೆಸುವ ತೋರು ದೀಪದಂತಿದೆ. ಈ ಬೆಳಕಿನ ಆಸರೆಯಲ್ಲಿಯೇ ನಾವು ನಮ್ಮ ಜೀವನದ ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಾ ಸಾಗಬಹುದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಸೋಮವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಖ ಸಂತೋಷ ಇಲ್ಲದ ಮೇಲೆ ಜೀವನಕ್ಕೆ ಅರ್ಥವಿರುವುದಿಲ್ಲ. ನಿಜವಾದ ಸಂತೋಷ ಸುಖ ನೆಮ್ಮದಿ ಕಾಣಬೇಕಾದರೆ ಭಗವಂತನನ್ನು ಅರಿಯಬೇಕು. ಅವನಲ್ಲಿ ಶರಣಾಗಬೇಕು. ಶ್ರೀಕೃಷ್ಣನ ಸಂದೇಶ ಪಾಲನೆ ಮಾಡಬೇಕು ಎಂದು ಹೇಳಿದರು.
ಅದ್ದೂರಿ ಮೆರವಣಿಗೆ :
ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಗರದ ಟಿ.ಬಿ. ರಸ್ತೆಯಲ್ಲಿರುವ ಕೃಷ್ಣಸ್ವಾಮಿ ದೇವಸ್ಥಾನ ಸೇರಿದಂತೆ ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ ಬುಧವಾರ ವಿಶೇಷ ಹೂವಿನ ಅಲಂಕಾರ, ಹೋಮ, ಪೂಜೆ ನಡೆಸಲಾಯಿತು.
ಯಾದವ ಕುಲಸ್ಥರು ಕುಟುಂಬ ಸಮೇತರಾಗಿ ಪೂಜೆಯಲ್ಲಿ ಪಾಲ್ಗೊಂಡರು. ಮಹಿಳೆಯರು ತಂಬಿಟ್ಟು ದೀಪಗಳನ್ನು ಮೆರವಣಿಗೆಯಲ್ಲಿ ತಂದು ಪೂಜೆಯನ್ನು ನೆರವೇರಿಸಿದರು.
ತಾಲ್ಲೂಕಿನ ಯಾದವ ಕುಲಸ್ಥರಿಂದ ಕೃಷ್ಣಸ್ವಾಮಿ ದೇವಸ್ಥಾನದಿಂದ ಪಲ್ಲಕ್ಕಿಯ ಮೆರವಣಿಗೆಯನ್ನು ಆಯೋಜಿಸಿದ್ದು, ಶ್ರೀಕೃಷ್ಣ ಮೂರ್ತಿಗಳಿರುವ ಮುತ್ತಿನ ಪಲ್ಲಕ್ಕಿಗಳು, ಸಪ್ತಾಶ್ವದ ರಥಗಳು, ಕೀಲುಕುದುರೆ, ಗಾರ್ಡಿಬೊಂಬೆ, ಯಕ್ಷಗಾನ ವೇಷದ ಬೊಂಬೆ, ತಮಟೆ ವಾದನ, ನಾದಸ್ವರ, ಶ್ರೀಕೃಷ್ಣ ವೇಷಧಾರಿಗಳಾದ ಮಕ್ಕಳು, ದೀಪಗಳನ್ನು ಹೊತ್ತ ಮಹಿಳೆಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಕವಾಗಿತ್ತು.
ನಗರದ ಉಲ್ಲೂರುಪೇಟೆಯ ಭಜನೆ ಮಂದಿರದಲ್ಲಿರುವ ಪುರಾತನ ತಂಜಾವೂರು ಚಿತ್ರಕಲೆಯ ಬಾಲಕೃಷ್ಣನ ಚಿತ್ರಪಟಕ್ಕೆ ವಿಶೇಷ ಅಲಂಕಾರವನ್ನು ಮಾಡಿ ಪೂಜೆಯನ್ನು ನೆರವೇರಿಸಲಾಯಿತು. ಉಯ್ಯಾಲೆಯಲ್ಲಿ ಬಾಲಕೃಷ್ಣ ಮೂರ್ತಿಯನ್ನಿರಿಸಿ ವಿವಿಧ ತಿಂಡಿಗಳನ್ನು ಕಟ್ಟಿ ತೂಗಿದರು.
ಶಾಸಕ ಬಿ.ಎನ್.ರವಿಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ನಗರಸಭಾ ಸದಸ್ಯರಾದ ಬಿ.ಎಂ.ಮುನಿರಾಜು, ಎನ್.ಲಕ್ಷ್ಮಣ, ಮನೋಹರ್, ಎಲ್.ಅನಿಲ್ ಕುಮಾರ್, ನವೀನ್, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಅಶ್ವತ್ಥಪ್ಪ, ಕೆ.ಕೇಶವಮೂರ್ತಿ, ವೈ.ರಾಮಕೃಷ್ಣಪ್ಪ, ವೆಂಕಟೇಶ್, ಬ್ರಹ್ಮಾನಂದರೆಡ್ಡಿ, ಜಿ.ರಾಮಚಂದ್ರಪ್ಪ, ಕೆ.ಕೃಷ್ಣಪ್ಪ, ದೊಡ್ಡಪಾಪಣ್ಣ ಹಾಜರಿದ್ದರು.