Sidlaghatta : ನಗರ ಅಥವಾ ಗ್ರಾಮೀಣ ಭಾಗದಲ್ಲಿ ಸರಕಾರದಿಂದ ಕೊರೆಸಿದ ಮತ್ತು ಖಾಸಗಿಯಾಗಿ ವಶಪಡಿಸಿಕೊಂಡ ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಆದಾಗ ಹೊಸದಾಗಿ ಕೊಳವೆಬಾವಿ ಕೊರೆಸುವುದು ಅನಿವಾರ್ಯ. ಹಾಗಾಗಿ ಹೊಸದಾಗಿ ಕೊಳವೆಬಾವಿ ಕೊರೆಸಲು ಅನುಮತಿಗಾಗಿ ಜಿಲ್ಲಾಕಾರಿಗಳಿಗೆ ಪತ್ರ ಬರೆಯಿರಿ ಎಂದು ಶಾಸಕ ಬಿ.ಎನ್.ರವಿಕುಮಾರ್ ಅವರು ತಹಸೀಲ್ದಾರ್‌ರಿಗೆ ಸೂಚಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಧ್ಯದ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದು ಮಾತನಾಡಿದರು.
ತಾಲ್ಲೂಕಿನಲ್ಲಿ 27 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳಲ್ಲಿ ಪರಿಸ್ಥಿತಿ ಬಿಗಡಾಯಿಸಲಿದ್ದು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಸಂಬಂಸಿದ ಅಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪಂಚಾಯಿತಿವಾರು ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳಿಂದ ಪಡೆದ ವರದಿ ಜತೆಗೆ ತಮ್ಮ ಗಮನಕ್ಕೆ ಬಂದ ಸಮಸ್ಯಾತ್ಮಕ ಗ್ರಾಮಗಳ ವಿವರ ನೀಡಿ, ಕೂಡಲೆ ಈ ಗ್ರಾಮಗಳಿಗೆ ಸಂಬಂದಿಸಿದವರನ್ನು ಕಳುಹಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ತಿಳಿಸಿದರು.
ಬರದ ಪರಿಸ್ಥಿತಿಯನ್ನು ಎದುರಿಸಲು ಸರಕಾರ ಹಣ ನೀಡಿದೆ. ನಗರಸಭೆಯಿಂದ, ಸ್ಥಳೀಯವಾಗಿ ಗ್ರಾಮ ಪಂಚಾಯಿತಿಯಿಂದಲೋ ಕೊರೆಸಿರುವ ಕೊಳವೆಬಾವಿಗಳಲ್ಲಿ ನೀರು ಇದ್ದರೆ ಪರವಾಗಿಲ್ಲ. ಟ್ಯಾಂಕರ್‌ಗಳ ಮೂಲಕವಾದರೂ ಪೂರೈಕೆ ಮಾಡಬಹುದು. ಆದರೆ ಯಾವುದೆ ಕೊಳವೆಬಾವಿಗಳಲ್ಲೂ ನೀರೆ ಇಲ್ಲದ ಮೇಲೆ ಮಾಡುವುದಾದರೂ ಏನು ? ಹಾಗಾಗಿ ಅನಿವಾರ್ಯ ಪರಿಸ್ಥಿತಿಯಲ್ಲಿ ಹೊಸದಾಗಿ ಕೊಳವೆಬಾವಿ ಕೊರಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಿರಿ. ಈ ಬಗ್ಗೆ ಸಚಿವ ಕೃಷ್ಣಬೈರೇಗೌಡ ಅವರು ನಮಗೆ ಸದನದಲ್ಲೇ ಸ್ಪಷ್ಟಪಡಿಸಿದ್ದಾರೆ. ಡಿಸಿ ಅವರಿಂದ ಅನುಮತಿ ಪಡೆದು ಹೊಸ ಕೊಳವೆಬಾವಿ ಕೊರೆಸಲು ಅವಕಾಶ ಇದೆ ಎಂದು ಹೇಳಿದರೆಂದು ಶಾಸಕ ರವಿಕುಮಾರ್ ತಿಳಿಸಿದರು.
ತಹಸೀಲ್ದಾರ್ ಅವರು, ಈಗಾಗಲೆ ನಗರದಲ್ಲಿ ನಗರಸಭೆಯಿಂದ ವಶಕ್ಕೆ ಪಡೆದುಕೊಂಡಿದ್ದ ಐದು ಖಾಸಗಿ ಕೊಳವೆಬಾವಿಗಳ ಬಾಬ್ತು ಬಾಕಿ ಇದ್ದ ಹಣದ ಪೈಕಿ ಒಂದೊಂದು ತಿಂಗಳ ಬಾಬ್ತು 90 ಸಾವಿರ ರೂ.ಗಳನ್ನು ಈಗಾಗಲೆ ಸಂಬಂದಿಸಿದವರ ಖಾತೆಗೆ ಕಳುಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇನ್ನೂ ಹೆಚ್ಚಿನ ಮೊತ್ತವನ್ನು ಖಾಸಗಿ ಕೊಳವೆಬಾವಿಗಳ ಮಾಲೀಕರಿಗೆ ನೀಡಬಹುದು ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದ್ದಕ್ಕೆ ತಹಸೀಲ್ದಾರ್ ಅವರು ಈ ಬಗ್ಗೆ ಸರಕಾರದ ಸುತ್ತೋಲೆಯೊಂದಿಗೆ ಪ್ರಸ್ತಾವನೆ ಕಳುಹಿಸಿ ಎಂದು ಸೂಚಿಸಿದರು.
ಇನ್ನು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಸ್ಥಿತಿಗತಿ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ, ಶಿಡ್ಲಘಟ್ಟ ನಗರ ಪ್ರದೇಶದಲ್ಲಿನ ಕುಡಿಯುವ ನೀರಿನ ಸ್ಥಿತಿಗತಿ ಕುರಿತಾಗಿ ಪೌರಾಯುಕ್ತ ಮಂಜುನಾಥ್ ಅವರು ಸಭೆಗೆ ಮಾಹಿತಿ ನೀಡಿದರು. ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.