Sidlaghatta : ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.
ಶಿಡ್ಲಘಟ್ಟ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಳಿ ಗುರುವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ಶಿಕ್ಷಕರ ನೇತೃತ್ವ ವಹಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳಾದ ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಭಾರಿ ವರ್ಗಾವಣೆ, ಮುಖ್ಯ ಶಿಕ್ಷಕರಿಗೆ 15, 20, 25 ವರ್ಷಗಳ ವೇತನ ಬಡ್ತಿ, ಸೇರಿದಂತೆ ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವಂತೆ ಒತ್ತಾಯಿಸಿ ರಾಜ್ಯ ಸಂಘದ ನೇತೃತ್ವದಲ್ಲಿ ವಿವಿಧ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರೂ ಸರ್ಕಾರ ಹಾಗೂ ಇಲಾಖೆಯಿಂದ ಯಾವುದೇ ಪ್ರಯೋಜನವಾಗಿಲ್ಲ.
ಹಾಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸೂಚನೆಯ ಮೇರೆಗೆ ಇಂದಿನಿಂದ ಅಕ್ಟೋಬರ್ 29 ರವರೆಗೂ ಕಪ್ಪು ಪಟ್ಟಿ ಧರಿಸುವ ಮೂಲಕ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಯೋಜನೆ ರೂಪಿಸಲಾಗಿದೆ. ಇಷ್ಟಾದರೂ ಸರ್ಕಾರ ಹಾಗೂ ಇಲಾಖೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗದೇ ಇದ್ದ ಪಕ್ಷದಲ್ಲಿ ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೂ ಮದ್ಯಾಹ್ನದ ಬಿಸಿಯೂಟದ ಮಾಹಿತಿಯನ್ನು ಅಪ್ಡೇಟ್ ಮಾಡದೇ ಇರುವ ಮೂಲಕ ಅಸಹಕಾರ ವ್ಯಕ್ತಪಡಿಸುವುದು ಹಾಗೂ ನವೆಂಬರ್ 11 ರಿಂದ ನವೆಂಬರ್ 18 ರವರೆಗೂ ಸ್ಯಾಟ್ಸ್ ಮಾಹಿತಿ ಅಪ್ಲೋಡ್ ಮಾಡದೇ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹಂತ ಹಂತವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಇಷ್ಟಾದರೂ ಸರ್ಕಾರ ಹಾಗೂ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ತರಗತಿ ಹಾಗೂ ಶಾಲಾ ಬಹಿಷ್ಕಾರ ನಡೆಸಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ಮೂಲಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸುಂದರಾಚಾರಿ, ಪಿಳ್ಳಣ್ಣ, ಸುದರ್ಶನ್.ಪಿ, ಸಾದಿಕ್ ಪಾಷ, ಮಂಜುನಾಥ.ಬಿ.ವಿ ಹಾಜರಿದ್ದರು.