Sidlaghatta : ಮಕ್ಕಳಿಗಾಗಿ ಆಸ್ತಿ ಸಂಪಾದನೆ ಮಾಡಿ ಸಾಕಷ್ಟು ಹಣ ಕೂಡಿಟ್ಟು ಅವರ ಬದುಕನ್ನು ಉತ್ತಮ ಮಾಡುವ ಪ್ರಯತ್ನಕ್ಕಿಂತ ಉತ್ತಮ ಸಂಸ್ಕಾರವಂತ ಮಕ್ಕಳನ್ನಾಗಿ, ಉತ್ತಮ ಆರೋಗ್ಯವಂತ ಸತ್ಪ್ರಜೆಗಳನ್ನಾಗಿ ರೂಪಿಸಿ. ಅವರನ್ನೇ ನಮ್ಮ ಆಸ್ತಿಯನ್ನಾಗಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ತಿಳಿಸಿದರು.
ನಗರದ ಶ್ರೀವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಒಂದಕ್ಕೊಂದು ಅವಿನಾವಭಾವ ಸಂಬಂಧ ಹೊಂದಿದೆ. ಮಕ್ಕಳಿಗೆ ಈಗಿನಿಂದಲೆ ನಾಡು ನುಡಿ ಭಾಷೆ ನೆಲ ಜಲ ಕುರಿತು ಅಭಿಮಾನ ಮೂಡಿಸಲು ಇದು ಸಹಕಾರಿ ಆಗುತ್ತದೆ ಎಂದು ಹೇಳಿದರು.
ನಾವು ಇಂದು ಜಾಗತಿಕ ಸ್ಪರ್ಧಾ ಜಗತ್ತಿನಲ್ಲಿದ್ದೇವೆ. ಹಾಗಾಗಿ ಓದು ವ್ಯವಹಾರಕ್ಕಾಗಿ ಇಂಗ್ಲೀಷ್ ಇನ್ನಿತರೆ ಭಾಷೆಗಳನ್ನು ಕಲಿಯುವುದು ಬಳಸುವುದು ಅನಿವಾರ್ಯವಾಗಿದೆ. ಆ ಸತ್ಯವನ್ನು ಒಪ್ಪಿಕೊಳ್ಳೋಣ. ಆದರೆ ನಮ್ಮ ತಾಯಿ ಭಾಷೆ, ಬದುಕಿನ ಭಾಷೆ ಕನ್ನಡ ಉಸಿರು ಹಾಗೂ ಬದುಕು ಆಗಬೇಕೆಂದರು.
ಇಂಗ್ಲಿಷ್ ಗೆ ಒಬ್ಬರೇ ವಿಲಿಯಂ ಷೇಕ್ಸ್‌ಪಿಯರ್, ಆದರೆ ಕನ್ನಡ ನಾಡಿನಲ್ಲಿ ಷೇಕ್ಸ್‌ಪಿಯರ್ ರನ್ನು ಮೀರಿಸುವ ಅನೇಕ ಸಾಹಿತಿಗಳು ಇದ್ದಾರೆ. ದೇಶದಲ್ಲಿಯೆ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ಕನ್ನಡ ಮಾತ್ರ. ಅದು ನಮ್ಮ ನಿಮ್ಮೆಲ್ಲರ ಹೆಗ್ಗಳಿಕೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮೂಕ ಜೀವ ಚಲನ ಚಿತ್ರದ ನಾಯಕ ನಟ ಶ್ರೀಹರ್ಷ ಮತ್ತು ನಿರ್ಮಾಪಕ ವೆಂಕಟೇಶ್, ನಿವೃತ್ತ ಶಿಕ್ಷಕ ಸಂಜೀವರೆಡ್ಡಿ, ನೇತ್ರಾವತಿ, ಅಂತರರಾಷ್ಟ್ರೀಯ ಕ್ರೀಡಾಪಟು ಪವನ್ ಕುಮಾರ್, ಮಾಜಿ ಶಾಸಕ ರಾಜಣ್ಣ, ನಾನಾ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು, ವಿವಿಧ ಕ್ರೀಡಾ ಪಟುಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಸಾಪ ಮಾಜಿ ಅಧ್ಯಕ್ಷ ವಿ.ಕೃಷ್ಣ ಮುಖ್ಯ ಭಾಷಣಕಾರರಾಗಿ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಮಾತನಾಡಿದರು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಟಿ.ಎ.ಕೃಷ್ಣಯ್ಯ ಶೆಟ್ಟಿ, ಆಡಳಿತಾಧಿಕಾರಿ ರೂಪಸಿ ರಮೇಶ್, ಕನ್ನಡ ಪಂಡಿತ ವೆಂಕಟಸ್ವಾಮಿ, ಶಿವಕುಮಾರ್, ಸಿ.ಕೆ.ರವಿ, ಆರ್ಯ ವೈಶ್ಯ ಮಂಡಳಿಯ ನಿರ್ದೇಶಕರು, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.