Sidlaghatta : Rabies ಎಂಬುದು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ಮಾರಣಾಂತಿಕ ಕಾಯಿಲೆಯಾಗಿದೆ. ಇದನ್ನು ಗುಣಪಡಿಸಲು ಯಾವುದೇ ರೀತಿಯ ಆರೋಗ್ಯ ಚಿಕಿತ್ಸೆ ಇಲ್ಲದ ಕಾರಣ ನಾಯಿಗಳಿಗೆ ಲಸಿಕೆಯನ್ನು ಕೊಡಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ವಹಿಸಬೇಕಾಗಿದೆ ಎಂದು ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಶ್ರೀನಾಥ್ ತಿಳಿಸಿದರು.
ನಗರ ಪಶು ಆಸ್ಪತ್ರೆ ಆವರಣದಲ್ಲಿ ಶನಿವಾರ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ರೇಬೀಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಬೀಸ್ ಖಾಯಿಲೆಯು ಸೋಂಕಿತ ನಾಯಿ, ಬೆಕ್ಕು, ನರಿ, ಹಸು, ಕುರಿ, ಕುದುರೆ, ಮುಂಗುಸಿ ಹಾಗೂ ಇತರೆ ಕಾಡು ಪ್ರಾಣಿಗಳ ಕಡಿತದಿಂದ ಹರಡುತ್ತದೆ. ರೇಬೀಸ್ ಖಾಯಿಲೆಯು ಸೋಂಕಿತ ನಾಯಿ ಕಡಿತದಿಂದ ಹೆಚ್ಚಾಗಿ ಹರಡುವ ಸಾಧ್ಯತೆ ಇರುವುದರಿಂದ ತಮ್ಮ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆಯನ್ನು ಹಾಕಿಸಬೇಕು. ನಾಯಿ ಕಡಿತದ ಗಾಯವನ್ನು ತಕ್ಷಣವೇ ಸಾಬೂನುನಿಂದ ಸ್ವಚ್ಛವಾಗಿ ಹರಿಯುವ ನೀರಿನಿಂದ ತೊಳೆಯಬೇಕು. ನಾಯಿ ಕಚ್ಚಿದ ಗಾಯಕ್ಕೆ ಮಣ್ಣು, ಹರಿಶಿನ, ವೀಳೆದಎಲ್ಲೆ ಸುಣ್ಣ ಎಣ್ಣೆಯಂತಹ ವಸ್ತುಗಳನ್ನು ಹಚ್ಚಬಾರದು. ಕಡಿತದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾವಿಸಿ ವೈದ್ಯರ ಸಲಹೆಯಂತೆ ಐದು ಡೋಸ್ ರೇಬೀಸ್ ಲಸಿಕೆಗಳನ್ನು ಪಡೆಯಬೇಕು ಎಂದು ರೇಬೀಸ್ ಕಾಯಿಲೆ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
ರೇಬೀಸ್ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ವಾರ್ಡುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭರತ್ ಅಭಿಲಾಶ್, ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ದೇವರಾಜ್, ವಿಜಯಮ್ಮ, ಆರೋಗ್ಯ ಕೇಂದ್ರ ಹಾಗು ಪಶು ಸಂಗೋಪನ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.