26.2 C
Bengaluru
Saturday, December 7, 2024

ಕನ್ನಡ ರಾಜ್ಯೋತ್ಸವ, ರಾಷ್ಟ್ರೀಯ ಏಕತಾ ದಿನಾಚರಣೆ

- Advertisement -
- Advertisement -

Sugaturu, Sidlaghatta : ಕನ್ನಡ ಸಾಹಿತ್ಯವನ್ನು ಯುವಪೀಳಿಗೆಯು ಸಮಗ್ರವಾಗಿ ಅಧ್ಯಯನ ಮಾಡಬೇಕಿದೆ. ಕನ್ನಡ ನಾಡಿನ ಕಲೆ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಾಡಿನ ಎಲ್ಲರ ಮೇಲಿದೆ. ಕನ್ನಡ ನಾಡು-ನುಡಿಗಳೆರಡೂ ಪ್ರತಿಯೊಬ್ಬರ ಜೀವನದ ಜೀವಾಳಗಳಾಗಿವೆ ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕನ್ನಡಾಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕ ಏಕೀಕರಣ ಹೋರಾಟದ ಸಂದರ್ಭದಿಂದ ಇಲ್ಲಿನವರೆಗೂ ಭಾಷೆ, ಸಾಹಿತ್ಯ, ನಾಡು-ನುಡಿ ಉಳಿಸುವಲ್ಲಿ ಕನ್ನಡಪರ ಸಂಘಟನೆಗಳು, ಸಂಘಸಂಸ್ಥೆಗಳ ಕೊಡುಗೆ ಅಮೂಲ್ಯವಾದುದು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಚನ ಸಾಹಿತ್ಯ, ಜಾನಪದಸಾಹಿತ್ಯ, ದಾಸಸಾಹಿತ್ಯದಂತಹ ಪ್ರಾಕಾರಗಳು ಸೀಮಂತಗೊಳಿಸಿದ್ದು, ಏಕೀಕೃತ ಕರ್ನಾಟಕದ ಕನಸನ್ನು ಸಾಕಾರಪಡಿಸುವಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದರು.

ದೇಶದ ರಕ್ಷಣಾ ವ್ಯವಸ್ಥೆ ರೂಪಿಸಿದ ರೂವಾರಿ: ಸ್ವಾತಂತ್ರ್ಯಾನಂತರದ ನವಭಾರತದ ರಾಷ್ಟ್ರೀಯ ಏಕೀಕರಣದಲ್ಲಿ ಸದಾರ್ ವಲ್ಲಭಬಾಯಿ ಪಟೇಲರ ಕೊಡುಗೆ ಅಪಾರವಾದುದು. ಆಧುನಿಕ ಅಖಿಲಭಾರತ ನಾಗರಿಕ ಸೇವಾ ವ್ಯವಸ್ಥೆ ಸ್ಥಾಪನೆ, ಒಗ್ಗಟ್ಟಾದ ದೇಶ ಕಟ್ಟುವ ಕಾರ್ಯ, ಅಧಿಕಾರ ವಿಕೇಂದ್ರೀಕರಣ, ಭಾರತ ಸಂವಿಧಾನ ರಚನೆ, ಪ್ರಾಂತ್ಯಗಳನ್ನು ಸೇರಿಸಿ ಒಕ್ಕೂಟ ರಚನಾ ಕಾರ್ಯದಲ್ಲಿ ಅವರು ಪ್ರಮುಖ ಪಾತ್ರವಹಿಸಿ ಏಕತಾ ಸಂದೇಶ ಸಾರಿದರು ಎಂದು ವಿವರಿಸಿದರು.

ವಿದ್ಯಾರ್ಥಿನಿ ಎಸ್.ಎಸ್.ಮೋನಿಷಾ ಮಾತನಾಡಿ, ಜನರಲ್ಲಿ ಮಾನವೀಯ ಸಂಬಂಧಗಳು ಕುಸಿಯುತ್ತಿದ್ದು ಕನ್ನಡಭಾಷೆಯ ಮೂಲಕ ಮಾನವೀಯ ಸಂಬಂಧಗಳು ಬೆಳೆಯಬಲ್ಲವು. ಈ ನಾಡಿನ ನೆಲಜಲವನ್ನು ಅನುಭವಿಸುವ ಎಲ್ಲರೂ ಕನ್ನಡವನ್ನು ಗೌರವಿಸಿ ಬಳಸಿ ವ್ಯವಹರಿಸಬೇಕು. ನಾಡು, ನುಡಿ, ಭಾಷೆ, ಸಾಹಿತ್ಯಕ್ಕೆ ಎಲ್ಲರೂ ತಲೆಬಾಗಬೇಕು ಎಂದರು.

ಬಸವನಬಾಗೇವಾಡಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕಿ ಮಮತಾ ಭೀಮೇಶ್ ಮಾತನಾಡಿ, ಕನ್ನಡ ನಾಡಿನಲ್ಲಿ ನೆಲ-ಜಲ, ಭಾಷೆ, ಸಾಹಿತ್ಯ ಕುರಿತಾಗಿ ಯಾವುದೇ ವಿಷಯದಲ್ಲಿ ಧಕ್ಕೆಯುಂಟಾದರೂ ಎಲ್ಲಾ ಕನ್ನಡಿಗರೂ ಒಗ್ಗೂಡಿ ಹೋರಾಡುವಂತಾಗಬೇಕು. ನಾಡಿನ ಸಮಗ್ರತೆ, ಅಖಂಡತೆಯ ಮನೋಭಾವನೆ ಜಾಗೃತಗೊಳ್ಳಬೇಕು ಎಂದರು.

ವಿದ್ಯಾರ್ಥಿ ಎಸ್.ಎಚ್.ಅರುಣ್‌ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಪುರಾತನ ಚರಿತ್ರೆ ಇದ್ದು, 5 ನೇ ಶತಮಾನದ ವೇಳೆಗಾಗಲೇ ಕನ್ನಡದಲ್ಲಿ ಸಮೃದ್ಧವಾದ ಸಾಹಿತ್ಯ ರಚನೆಯಾಗಿತ್ತೆಂಬುದು ತಿಳಿದುಬರುತ್ತದೆ. ಎಲ್ಲಾ ಭಾಷೆಗಳನ್ನು ಕಲಿತರೂ ಕನ್ನಡವನ್ನೇ ಹೆಚ್ಚೆಚ್ಚು ಬಳಸಬೇಕು ಎಂದರು.

ರಾಷ್ಟ್ರಧ್ವಜಾರೋಹಣ, ಕನ್ನಡಧ್ವಜಾರೋಹಣ, ಭುವನೇಶ್ವರಿ ಭಾವಚಿತ್ರದ ಪೂಜೆ, ಅಲಂಕಾರ, ಮಕ್ಕಳು ಧರಿಸಿದ್ದ ಕೆಂಪು, ಹಳದಿಬಣ್ಣದ ಬಟ್ಟೆಯ ಶಾಲು ಆಕರ್ಷಣೀಯವಾಗಿದ್ದವು. ಕನ್ನಡಾಂಭೆ, ಕನ್ನಡ ನಾಡು, ನುಡಿ, ರಾಜರ ಆಳ್ವಿಕೆಯ ಕಾಲದ ವೇಷಭೂಷಣ ಧರಿಸಿ ಅಭಿನಯಗೀತೆಗಳನ್ನು ಪ್ರದರ್ಶಿಸಿದರು. ಕನ್ನಡಗೀತೆಗಳ ಗಾಯನ, ನೃತ್ಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಕನ್ನಡ ಶಬ್ಧ ರತ್ನಕೋಶಗಳನ್ನು ವಿತರಿಸಲಾಯಿತು.

ಎಸ್‌.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್‌ಕುಮಾರ್, ಶಿವಶಂಕರಪ್ಪ, ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಗಿರೀಶ್, ಶಿಕ್ಷಕ ಎ.ಬಿ.ನಾಗರಾಜು, ಬಿ.ನಾಗರಾಜು, ಮಧು, ಶಿಕ್ಷಕಿ ತಾಜೂನ್ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!