Chikkaballapur : ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 7ರಿಂದ 9ರವರೆಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ನೇತೃತ್ವದಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ (Swachhta Hi Sewa (SHS) Fortnightly Campaign) ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ “ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಸರ್ಕಾರವು ಸೆ.14 ರಿಂದ ಅ.2 ರ ವರೆಗೆ ‘ಸ್ವಚ್ಛತಾ ಹೀ ಸೇವಾ ಪಾಕ್ಷಿಕ’ ಹಮ್ಮಿಕೊಂಡಿದ್ದು ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲಿ ಸ್ವಚ್ಛತೆ ಇರುತ್ತದೆಯೊ ಅಲ್ಲಿ ನಮ್ಮ ಮನಸ್ಸು ಸ್ವಚ್ಛ ಹಾಗೂ ಸುಂದರವಾಗಿರುತ್ತದೆ. ಸ್ವಚ್ಛತಾ ಹೀ ಸೇವಾ ಪಾಕ್ಷಿಕರಡಿ ನಾಲ್ಕು ಭಾಗಗಳಿದ್ದು, ಗಿಡಗಳನ್ನು ನೆಡುವುದು, ಸ್ಥಳೀಯ ನೃತ್ಯ ಸೇರಿದಂತೆ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸುವುದು, ಸಾರ್ವಜನಿಕ ಕಚೇರಿ ಮತ್ತು ಶೌಚಾಲಯ, ಉದ್ಯಾನಗಳನ್ನು ಸ್ವಚ್ಛ ಮಾಡುವುದು ಹಾಗೂ ಪ್ರತಿಯೊಬ್ಬರೂ ಒಂದು ಗಿಡ ನೆಡುವ ಕಾರ್ಯಕ್ರಮಗಳು ಸೇರಿವೆ” ಎಂದು ಹೇಳಿದರು.
ಸ್ವಚ್ಛತಾ ಕಾರ್ಯದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ಭಾಸ್ಕರ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಈಶ್ವರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ನಗರ ಸಭೆಯ ಪೌರಕಾರ್ಮಿಕರು ಭಾಗಿಯಾಗಿದ್ದರು.