Sidlaghatta : ಅಮೆರಿಕಾದ ವರ್ಜೀನಿಯಾ ಸಂಸ್ಥಾನದ ರಿಚ್ಮಂಡ್ ನಗರದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 12 ನೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಶಿಡ್ಲಘಟ್ಟದ ತಮಟೆ ವಾದನದ ಶಬ್ದ ಮೋಡಿ ಮಾಡುತ್ತಿದೆ.
ಪದ್ಮಶ್ರೀ ಮತ್ತು ನಾಡೋಜ ಪುರಸ್ಕೃತ ತಮಟೆ ವಾದಕ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಅವರ ಮಗ ಪಸನ್ನ, ತನ್ನ ಗುರು ಹಾಗೂ ತಂದೆಯ ಕೀರ್ತಿಯನ್ನು ಮತ್ತು ಶಿಡ್ಲಘಟ್ಟ ತಾಲ್ಲೂಕಿನ ದೇಸಿ ಸೊಗಡನ್ನು ಅಮೆರಿಕದಲ್ಲಿ ತನ್ನ ತಮಟೆ ವಾದನದ ಮೂಲಕ ತಲುಪಿಸುವ ರಾಯಭಾರಿಯಾಗಿದ್ದಾನೆ.
ಶಿಡ್ಲಘಟ್ಟ ತಾಲ್ಲೂಕಿನಿಂದ ಪ್ರಸನ್ನ ಮತ್ತು ಮಧು ಎಂಬ ಇಬ್ಬರು ಯುವಕರು ಅಮೆರಿಕದಲ್ಲಿ ತಮ್ಮ ಬೆರಳ ನುಡಿಸುವಿಕೆಯಿಂದ ಅಲ್ಲಿನ ಕನ್ನಡಿಗರ ಮನಗೆದ್ದಿದ್ದಾರೆ. ಪ್ರಸನ್ನ ತಮಟೆ ಬಾರಿಸಿದರೆ, ಮಧು ತಾಸೆ ಎಂಬ ವಾದ್ಯವನ್ನು ನುಡಿಸುತ್ತಿದ್ದಾರೆ.
ಅಮೆರಿಕೆಯಲ್ಲಿನ ಅಕ್ಕ ಸಮ್ಮೇಳನದಲ್ಲಿ ಪ್ರಸನ್ನ ತನ್ನ ತಮಟೆ ವಾದನದ ಶಬ್ಧದಿಂದ ಅಮೆರಿಕನ್ನಡಿಗರ ಗುಂಡಿಗೆಯನ್ನು ತಟ್ಟಿ ಎಬ್ಬಿಸುತ್ತಿದ್ದಾರೆ. ತಾಳ, ನಾದ, ರಾಗ ಬದ್ಧವಾಗಿ ತಮಟೆ ನುಡಿಸುತ್ತಾ, ತನ್ನ ಕೈಬೆರಳುಗಳಿಂದ ತಮಟೆಯ ಮೇಲೆ ಮೋಡಿ ಮಾಡುತ್ತಾ, ಅಲ್ಲಿನವರ ಮನಗೆದ್ದಿದ್ದಾರೆ.
ದೇಶೀಯ ಸೊಗಡು ಮತ್ತು ಸೊಬಗನ್ನು ಯಶಸ್ವಿಯಾಗಿ ಆವಾಹಿಸಿಕೊಂಡಿರುವ ಏಕಮೇವ ಗಂಡುಕಲೆ ತಮಟೆವಾದನ. ತಮಟೆವಾದನ ಬಯಲು ಸೀಮೆಯ ಜನಕ್ಕೆ ಸುಪರಿಚಿತ. ಮಾನವನ ಅಂತಿಮಯಾತ್ರೆಯಲ್ಲಿ ಮಸಣದವರೆಗೂ ಜತೆನೀಡಿ ವಿದಾಯ ಹೇಳುವುದೂ ತಮಟೆಯ ನಾದದಿಂದಲೇ. ಊರಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು.