Chintamani : ಸಸಿಗಳನ್ನು ನೆಟ್ಟು ಪೋಷಿಸಿ ಪರಿಸರ ಕಾಳಜಿ ಮೆರೆದ ತಾಲ್ಲೂಕಿನ ಯುವ ಶಕ್ತಿ (YuvaShakthi) ಸಂಸ್ಥೆಗೆ ಕೃಷಿ ಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆಯು ಪರಿಸರ ತಜ್ಞ ಟಿ.ಎಚ್.ಮಲ್ಲಿಕಾರ್ಜುನ ರಾಜ್ಯ ಮಟ್ಟದ ಪರಿಸರ ಪ್ರಶಸ್ತಿ ನೀಡಿ ಸತ್ಕರಿಸಿದೆ.
ಯುವಶಕ್ತಿ ಸಂಘಟನೆಯಿಂದ ಟೆಲಿ ಇಂಡಿಯಾ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ನೆರವಿನಿಂದ ಚಿಂತಾಮಣಿ ತಾಲ್ಲೂಕಿನ ಗಡಿಗವಾರಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2015 ರಲ್ಲಿ 2000 ಗಿಡ ನೆಟ್ಟು ಪೋಷಿಸಿದ್ದು ಎಲ್ಲ ಸಸಿಗಳು ಬೆಳೆದು ನಿಂತು ಇದೀಗ ಅರಣ್ಯವಾಗಿದೆ.
ಬೆಂಗಳೂರಿನ ಯುಎಎಸ್ ಅಲುಮ್ನಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಶಕ್ತಿಯ ಅಧ್ಯಕ್ಷ ಶಿವಪ್ರಕಾಶ್ ರೆಡ್ಡಿ, ಉಪಾಧ್ಯಕ್ಷ ವಿಜಯ ಭಾವರೆಡ್ಡಿ, ಟೆಲಿ ಇಂಡಿಯಾ ಸಂಸ್ಥೆಯ ಮಹಾಂತೇಶ್, ಸುಧಾಕರ್ ರೆಡ್ಡಿ ಹಾಗೂ ಮೊರಾಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಗೆ ಮಲ್ಲಿಕಾರ್ಜುನಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕೃಷಿ ಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಅಜಯ ಮಿಶ್ರ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ಸಸಿಗಳನ್ನು ನೆಡುವ ಕಾರ್ಯದಲ್ಲಿ ಭಾಗವಹಿಸಿದ್ದ ಯುವಶಕ್ತಿಯ ಮುನಿರೆಡ್ಡಿ, ರೋಹಿತ್, ರಾಘವೇಂದ್ರ, ಕ್ಯಾಲನೂರು ಸುಬ್ಬು, ಪ್ರತಾಪ್, ಲೋಕೇಶ್, ಜಯರಾಮ್, ಬಟ್ಲಹಳ್ಳಿ ಪ್ರಶಾಂತ್, ನರಸಿಂಹ, ಪ್ರಸನ್ನ, ಬಾಬುರೆಡ್ಡಿ, ಮಂಜುನಾಥ್ ರೆಡ್ಡಿ, ವಿನೋದ್, ನವೀನ್ ಹಾಜರಿದ್ದರು.