Sugaturu, Sidlaghatta : ಪ್ರತಿಯೊಬ್ಬರೂ ತಮ್ಮ ನಡೆ, ನುಡಿ, ಆಲೋಚನೆಗಳಲ್ಲಿ ವಿಮರ್ಶಿಸಿಕೊಳ್ಳಬೇಕಾದ ವಿಧಾನವನ್ನು ಅರಿತುಕೊಳ್ಳಬೇಕು. ಆಡುವ ಪ್ರತಿಯೊಂದು ಮಾತಿನಲ್ಲಿಯೂ ಸತ್ಯವಿದೆಯೇ ಎಂಬುದನ್ನು ಮೊದಲು ಯೋಚಿಸಬೇಕು ಎಂದು ಬೆಂಗಳೂರು ರೋಟರಿ ವೆಸ್ಟ್‌ನ (Rotary club Bangalore West) ಅಧ್ಯಕ್ಷ ನಾಗೇಶ್‌ಶ್ರೀಧರ್‌ಮೂರ್ತಿ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಜಯಪುರ ರೋಟರಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಚತುರ್ವಿಧ ಪರೀಕ್ಷೆ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾವು ಆಡುವ ಮಾತು, ಮಾಡುವ ಕಾರ್ಯವು ನ್ಯಾಯಸಮ್ಮತವಾಗಿರಬೇಕು. ಪ್ರತಿ ಚಟುವಟಿಕೆಯೂ ಸದ್ಭಾವನೆ ಮತ್ತು ಸ್ನೇಹವನ್ನು ವೃದ್ಧಿಸುವಂತಿರಬೇಕು. ಅದು ಸಮಾಜಕ್ಕೆ ಉಪಯುಕ್ತವೂ, ಅಭಿವೃದ್ಧಿಗೆ ಪೂರಕವೂ ಆಗಿರವುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದರು.
ವಿಜಯಪುರ ರೋಟರಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಎಲ್ಲರೂ ಸ್ವಾರ್ಥವನ್ನು ವರ್ಜಿಸಬೇಕು. ಮಾನವೀಯಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಮಯಪ್ರಜ್ಞೆ, ಕರುಣೆ, ಸೇವಾ ಮನೋಭಾವನೆಯಂತಹ ಮೌಲ್ಯಗಳನ್ನು ರೂಡಿಸಿಕೊಂಡು ಸರ್ವಸಮಾನತೆಯ ಸಮಾಜದ ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕು ಎಂದರು.
ವಿದ್ಯಾರ್ಥಿಗಳಿಗೆ ವಿಜಯಪುರ ರೋಟರಿ ವತಿಯಿಂದ ಚತುರ್ವಿಧ ಪರೀಕ್ಷೆಯ ಭಿತ್ತಿಪತ್ರ, ಕಾರ್ಡುಗಳನ್ನು ವಿತರಿಸಲಾಯಿತು. ವಿವಿಧ ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಬೆಂಗಳೂರು ವೆಸ್ಟ್ ರೋಟರಿ ನಿರ್ದೇಶಕರಾದ ಎಚ್.ನಾಗರಾಜು, ಎಂ.ಆರ್.ಶಿವಕುಮಾರ್. ಸಿಆರ್‌ಪಿ ರಮೇಶ್‌ಕುಮಾರ್, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕರಾದ ಬಿ.ನಾಗರಾಜು, ಎ.ಬಿ.ನಾಗರಾಜ, ನಾರಾಯಣಸ್ವಾಮಿ, ತಾಜೂನ್, ಮಂಜುಳಾ, ಮತ್ತಿತರರು ಹಾಜರಿದ್ದರು.