Iragappanahalli, Sidlaghatta : ಒಕ್ಕಲಿಗ ಅನ್ನದಾತ, ಮನುಷ್ಯ ಜೀವಿಗಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಅವನು ಅನ್ನದಾತನೆ ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿಯ ಇರಗಪ್ಪನಹಳ್ಳಿಯಲ್ಲಿ ಶ್ರೀ ಗೆರಿಗಮ್ಮದೇವಿ ದೇವಾಲಯದ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ದೇವಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿಗವಿಂಟಿ ಗರಿಗಿರೆಡ್ಡಿ ಅವರ “ಇರಗಪ್ಪನಹಳ್ಳಿ ಒಕ್ಕಲಿಗರ ದ್ಯಾವರ ಸಂಪ್ರದಾಯಗಳು” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ, “ಹೊಸದ್ಯಾವರ ಒಕ್ಕಲಿಗರ ಮೂಲ ಮತ್ತು ದ್ಯಾವರ ಸಂಪ್ರದಾಯಗಳ” ಬಗ್ಗೆ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಒಕ್ಕಲುತನ ಮನಕುಲದ ಪ್ರಪ್ರಥಮ ಕಸುಬು. ಈ ಮೂಲಕಸಬು ವೃದ್ಧಿಯಾದಂತೆಲ್ಲ ವಿವಿಧ ಅವಶ್ಯಕ ಕಸುಬುಗಳು ಜತೆಸೇರಿಕೊಂಡು ನಾಗರಿಕತೆಯೊಂದಿಗೆ ಬೆಸೆದು ಕೊಂಡವು.ಅಂತೆಯೆ ಕಸುಬು ಆಧಾರಿತ ನೂರಾರು ಜಾತಿಗಳು ಹುಟ್ಟು ಪಡೆದವು. ಅವುಗಳು ಬದುಕಿಗೆ ಪೂರಕ- ವಾಗುವುದರ ಜೊತೆಗೆ ಜೀವನಾಧಾರವೂ ಆದವು ಮತ್ತು ಆದಾಯದ ಮೂಲವೂ ಆದವು. ಆದರೆ ಇವರುಗಳ ನಡುವೆ ಒಕ್ಕಲಿಗನದು ಮಾತ್ರ ಮನುಕುಲದ ಜೀವದಾತನಾಗಿ ನಿಸ್ವಾರ್ಥಯೋಗಿಯಂತೆ ಲಾಭ-ನಷ್ಟಗಳನ್ನು ಬದಿಗಿಟ್ಟು ಕೃಷಿಕಾಯಕವನ್ನು ನಡೆಸಲೇಬೇಕಾದ ಅನಿವಾರ್ಯತೆ ಎಂದರು.
ಹದಿಮೂರನೆ ಶತಮಾನದಿಂದ ಪ್ರಾರಂಭ ಗೊಂಡು, ಹದಿನೆಂಟನೇ ಶತಮಾನದ ಕೊನೆಯವರೆಗೂ ಈ ಮೊರಸುನಾಡಿನಲ್ಲಿ, ಮೊರಸು ಒಕ್ಕಲಿಗರು ನೇಗಿಲು ಹಿಡಿಯುವ ಕೈಗಳಲ್ಲಿ ರಾಜ್ಯಾಡಳಿತ ನಡೆಸಿದುದು ಒಂದು ಚಾರಿತ್ರಿಕ ಮೈಲಿಗಲ್ಲು. ಹದಿನೈದು ಮತ್ತು ಹದಿನಾರನೇ ಶತಮಾನದ ಆರಂಭದಲ್ಲಿ ಸುಗಟೂರು (1418), ಯಲಹಂಕ (1420), ಚಿಕ್ಕಬಳ್ಳಾಪುರ (1479), ದೇವನಹಳ್ಳಿ (1501) ಮತ್ತು ದೊಡ್ಡಬಳ್ಳಾಪುರ (1508) ಪಾಳೆಯಪಟ್ಟುಗಳು ಸ್ಥಾಪನೆಗೊಂಡು ಒಂದೊಂದೂ ಸಹ ಎರಡು ಶತಮಾನಗಳಿಗೂ ಮಿಕ್ಕು ರಾಜ್ಯಾಡಳಿತ ನಡೆಸಿದುದು ಮೊರಸು ಒಕ್ಕಲಿಗರ ದೊಡ್ಡಸಾಧನೆ ಎಂದು ವಿವರಿಸಿದರು.
ಈ ಗೌಡಪ್ರಭುಗಳ ಇತಿಹಾಸವನ್ನ ಈಗಿನ ಪೀಳಿಗೆಗೆ, ಬಯಲು ಸೀಮೆಯ ಒಕ್ಕಲಿಗರಿಗೆ ತಿಳಿಸಿಕೊಡುವ ಸಾರ್ಥಕ ಕೆಲಸ ಆಗಬೇಕಾಗಿದೆ. ಪಠ್ಯಪುಸ್ತಕ ಹಾಗೂ ಇತಿಹಾಸದ ಪುಸ್ತಕಗಳ ಮೂಲಕ ವಿದ್ಯಾರ್ಥಿಗಳಿಗೆ ಅವರ ಪರಿಚಯ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.
ಬೆಳಗ್ಗೆಯಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ಕಳಶ ಸ್ಥಾಪನೆ, ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾ ಹೋಮ, ಗಂಗಮ್ಮ ದೇವಿ ಮೂಲ ಮಂತ್ರ ಹೋಮ, ಶ್ರೀ ಗಂಗಮ್ಮ ದೇವಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು.
ಶ್ರೀ ಗೆರಿಗಮ್ಮದೇವಿ ದೇವಾಲಯದ ಸೇವಾ ಟ್ರಸ್ಟ್ ಅಧ್ಯಕ್ಷ ಗೊಟ್ಟಿಗೆರೆ ಜಿ.ಕೆ.ರಾಜಣ್ಣ, ಗೌರವಾಧ್ಯಕ್ಷ ಜಿ.ಎಂ.ಜಯಪಾಲರೆಡ್ಡಿ, ನಿವೃತ್ತ ಪ್ರಾಧ್ಯಾಪಕ ಡಾ.ನಾಗರಾಜ, ಪ್ರಧಾನ ಅರ್ಚಕ ಎ.ಕೃಷ್ಣಪ್ಪ, ಪಿ.ಪ್ರಶಾಂತ್, ಬಿ.ನರೇಶ್ ಬಾಬು, ಎನ್.ಬೈರಾರೆಡ್ಡಿ, ಬಿ.ಪಾಪಣ್ಣ, ಜಿ.ಎನ್.ಶೇಖರ್, ಎಚ್.ಎ.ಗೆರಿಗಪ್ಪ ಹಾಜರಿದ್ದರು.