Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಬ್ಯಾಟರಾಯ ಸ್ವಾಮಿ ದೇವಾಲಯದ ಗರ್ಭ ಗುಡಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು, ದೇವಾಲಯದ ಹೊರಗಡೆ ಹಾಗೂ ದೇವಾಲಯದ ಸುತ್ತಲೂ ರಕ್ತದ ಕಲೆಗಳು ಕಂಡು ಬಂದಿದೆ.
ದೇವಾಲಯದ ಗರ್ಭ ಗುಡಿಯ ಗೋಪುರ ಶಿಥಿಲವಾಗಿದ್ದುದರಿಂದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೇವಾಲಯದಲ್ಲಿ ಯಾರು ಇಲ್ಲದ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಮಾಂಸ ಹಾಗೂ ರಕ್ತವನ್ನು ಚೆಲ್ಲಿ ಹೋಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದೇವಾಲಯದ ಅರ್ಚಕ ಹರೀಶ್ ಮಾತನಾಡಿ, ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯಕ್ಕೆ ಅನಾದಿಕಾಲದಿಂದಲೂ ನಮ್ಮ ಮನೆತನದವರು ದೇವಾಲಯದಲ್ಲಿ ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದು, ಎಂದಿನಂತೆ ಇಂದು ದೇವಾಲಯಕ್ಕೆ ಬಂದಾಗ ಇಲ್ಲಿ ನಡೆದಿರುವ ದುರ್ಘಟನೆ ಕಂಡು ಬೆರಗಾಗಿ ಗ್ರಾಮಸ್ಥರಿಗೆ ತಿಳಿಸಿದ್ದು,ನಂತರ ಪೊಲೀಸರಿಗೆ ತಿಳಿಸಲಾಗಿದೆ ಎಂದು ಹೇಳಿದರು
ಗ್ರಾಮದ ಮುನೇಗೌಡ ಮಾತನಾಡಿ, ಸಾವಿರಕ್ಕೂ ಹೆಚ್ಚು ವರ್ಷಗಳ ಹಳೆಯ ಕಾಲದ ದೇವಾಲಯದಲ್ಲಿ ಹಿಂದೆಂದಿಗೂ ನಡೆಯದ ದುರ್ಘಟನೆ ಇಂದು ನಡೆದಿದ್ದು ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಈ ಕೃತ್ಯ ಎಸಗಿದವರನ್ನು ಆದಷ್ಟು ಬೇಗ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದರು.