Chikkaballapur : ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಬಿಜೆಪಿ ಕಚೇರಿಗೆ ಭಾನುವಾರ ಸಂಜೆ ಮಾಜಿ ಸಚಿವ ಬಿ.ಶ್ರೀರಾಮುಲು (B. Sriramulu) ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಬಿ.ಶ್ರೀರಾಮುಲು “ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದ ಸಮಯದಲ್ಲಿ ಜಾರಿಗೊಳಿಸಿದ ರೈತಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ಕೇಂದ್ರದ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಜಾರಿಯಾಗಿರುವ ಜನಪರ, ರೈತ ಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಪರಿಣಾಮಕಾರಿಯಾಗಿ ಮಾಹಿತಿ ನೀಡಬೇಕು. ಈ ಎಲ್ಲ ವಿಷಯಗಳನ್ನು ಜನರಿಗೆ ಮನದಟ್ಟು ಮಾಡಿಕೊಟ್ಟು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಬೇಕು. ಈ ಕಾರಣದಿಂದ ಕಾರ್ಯಕರ್ತರು ಈಗಲೇ ಚುನಾವಣಾ ಸಿದ್ಧತೆಗಳನ್ನು ಮತ್ತು ಸಂಘಟನೆಯನ್ನು ಚುರುಕುಗೊಳಿಸಬೇಕು. ಉತ್ತಮ ಸಂಘಟಕರಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಿಸಿದ್ದು ಅವರ ನೇತೃತ್ವದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಲಿದೆ” ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಬಿ.ವಿ.ಆನಂದ್, ವಕ್ತಾರ ದೇವಸ್ಥಾನ ಹೊಸಹಳ್ಳಿ ರಾಮಣ್ಣ, ಯುವ ಘಟಕದ ಕಿರಣ್, ಮುಖಂಡರಾದ ಬಾಲಕುಂಟಹಳ್ಳಿ ಗಂಗಾಧರ್, ಲಕ್ಷ್ಮಿನಾರಾಯಣಗುಪ್ತ ಮತ್ತಿತರರು ಹಾಜರಿದ್ದರು.