ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ಬುಧವಾರ ದಿನಸಿಕಿಟ್ ವಿತರಿಸಿ ತಹಶೀಲ್ದಾರ್ ಡಿ.ಎ.ದಿವಾಕರ್ ಮಾತನಾಡಿದರು.
ತಾಲ್ಲೂಕಿನ ತೃತೀಯಲಿಂಗಿಗಳಿಗೆ ಹಾಗೂ ಬಡಜನರಿಗೆ ಜಿಲ್ಲಾಡಳಿತದ ವತಿಯಿಂದ ಆಹಾರ ದಿನಸಿಕಿಟ್ ಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ಜಿಲ್ಲಾಡಳಿತದಿಂದ ಬಂದಿರುವ ಆಹಾರ ದಿನಸಿ ಕಿಟ್ ಗಳನ್ನು ಬಡಜನರಿಗೆ, ನಿರ್ಗತಿಕರಿಗೆ, ತೃತೀಯ ಲಿಂಗಿಗಳಿಗೆ ವಿತರಿಸಲಾಗಿದೆ. ತಾಲ್ಲೂಕಿನ ಆಡಳಿತದಿಂದ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದ್ದು ಉತ್ತಮವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಪಾಸಿಟಿವ್ ಬಂದಿರುವವರ ಮನೆಗಳಲ್ಲಿ ಪ್ರತ್ಯೇಕ ಕೋಣೆ ಹಾಗೂ ಶೌಚಾಲಯ ಸೌಲಭ್ಯ ಇರದಿದ್ದರೆ ಮನೆಯಲ್ಲಿ ಮಕ್ಕಳು, ವೃದ್ಧರು ಮತ್ತು ಇತರರಿಗೆ ಹರಡುವ ಅವಕಾಶ ಇರುತ್ತಾರೆ. ಆದ್ದರಿಂದ ಹೋಂ ಕ್ವಾರೇಂಟೈನ್ ಗಳಲ್ಲಿ ಇರುವವರು ತ್ಯೇಕ ಕೋಣೆ ಹಾಗೂ ಶೌಚಾಲಯ ಸೌಲಭ್ಯ ಇರದಿದ್ದರೆ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.
ಕೋವಿಡ್ ಸೋಂಕು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆವರಿಸಿದೆ. ಜನರು ನಿರ್ಲಕ್ಷ್ಯ ವಹಿಸದೇ, ಎಚ್ಚರದಿಂದ ಇರಬೇಕು. ಸೋಂಕಿನ ಲಕ್ಷಣಗಳು ಕಂಡುಬಂದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪಾಸಿಟಿವ್ ಬಂದರೆ ಧೈರ್ಯ ಕಳೆದುಕೊಳ್ಳಬಾರದು ಎಂದು ಹೇಳಿದರು.
ಜನರು ಸೋಂಕನ್ನು ತಡೆಗಟ್ಟಲು ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಪಿ.ರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣ ರೆಡ್ಡಿ, ಅಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.