Bagepalli : ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪದಾಧಿಕಾರಿಗಳು (Government Employees Union) ಬುಧವಾರ ಏಳನೇ ವೇತನ ಜಾರಿ, ಹಳೆ ನಿಶ್ಚಿತ ಪಿಂಚಣಿ ಮರುಸ್ಥಾಪನೆ, ಖಾಲಿ ಹುದ್ದೆಗಳು ಭರ್ತಿ ಹಾಗೂ ಹೊರಗುತ್ತಿಗೆ ನೌಕರರಿಗೆ ಕೆಲದ ಭದ್ರತೆ ಒದಗಿಸುವಂತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ (Protest) ನಡೆಸಿ ತಹಶೀಲ್ದಾರ್ ಪ್ರಶಾಂತ್ ಕೆ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಒಕ್ಕೂಟದ ತಾಲ್ಲೂಕು ಸಮಿತಿ ಕಾರ್ಯದರ್ಶಿ ಎಚ್.ಎಸ್.ಸುಬ್ರಮಣ್ಯಂ ಮಾತನಾಡಿ “ಏಳನೇ ವೇತನದ ಆಯೋಗ ತನ್ನ ಶಿಫಾರಸು ಸಲ್ಲಿಸಲು ಎರಡು ಭಾರಿ ಅವಧಿ ವಿಸ್ತರಣೆ ಪಡೆದು ಸುಧೀರ್ಘ ಕಾಲದ ನಂತರ ವರದಿ ಸರ್ಕಾರಕ್ಕೆ ಸಲ್ಲಿಸಿದೆ. ಏಳನೇ ವೇತನದ ಆಯೋಗದ ವರದಿ ಗೊಂದಲಗಳಿಗೆ ಅವಕಾಶ ನೀಡಿದೆ. ನೌಕರರ ವೇತನ ಪ್ರಮಾಣ ಕಡಿತಗೊಳಿಸುವ ಕ್ರಮಗಳನ್ನು ಅನುಸರಿಸಿದೆ. ಹೊಸ ಪಿಂಚಿಣಿ ವ್ಯವಸ್ಥೆಯಿಂದ ಸರ್ಕಾರಿ ನೌಕರರಿಗೆ ನಿಶ್ಚಿತ ಪ್ರಮಾಣದ ಪಿಂಚಿಣಿ ಸಿಗದೆ ನೌಕರರ ಬದುಕು ಬೀದಿಗೆ ಬಿದ್ದಿದೆ” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ನಾರಾಯಣಸ್ವಾಮಿ ಡಿ.ಕೊತ್ತಪಲ್ಲಿ, ಬಿ.ಎನ್.ಮುರಳಿ, ಅನಿಲ್ ಚಿತ್ರಗಾರ್, ಗುರಿಕಾರ್‍ಶಿವಾನಂದ್, ಸುರೇಶ್, ಶಿವರಾಜ್, ವಿನೋದ್, ವೆಂಕಟೇಶ್, ಎನ್.ಸುನಿತ ಮತ್ತಿತರರು ಉಪಸ್ಥಿತರಿದ್ದರು.