Bagepalli : ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಗ್ರಾಮದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರ ಕುಂದುಕೊರತೆ ಸಭೆ ಹಾಗೂ ಪಿಂಚಿಣಿ ಆದೇಶ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿದರು.
ಕಂದಾಯ ಇಲಾಖೆಯ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ತೆರಳಿ, ದಾಖಲೆಗಳನ್ನು ಸಂಗ್ರಹಿಸಿ ಪಿಂಚಣಿ ಪ್ರಮಾಣಪತ್ರಗಳನ್ನು ವಿತರಣೆ ಮಾಡುತ್ತಿರುವುದು ಗುಡಿಬಂಡೆ ತಾಲ್ಲೂಕಿನ ಇತಿಹಾಸದಲ್ಲಿಯೇ ಇದೇ ಮೊದಲು. ಕೆಲ ಮುಖಂಡರು ವಿನಾಕಾರಣ ಪ್ರತಿಭಟನೆ ಮಾಡುತ್ತಿದ್ದು, ರಾಜಕೀಯ ಮಾಡುವುದನ್ನು ನಿಲ್ಲಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಒಂದೇ ದಿನ 688 ಫಲಾನುಭವಿಗಳಿಗೆ ವುದ್ದಾಪ್ಯವೇತನ, ಸಂಧ್ಯಾ ಸುರಕ್ಷಾ ಯೋಜನೆಗಳ ಮೂಲಕ ಪಿಂಚಣಿ ವಿತರಣೆ ಮಾಡಲಾಗುತ್ತಿದೆ. ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಜತೆ ಚರ್ಚಿಸಿ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಳ್ಳಲು ₹25 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ. ವಯೋ ವೃದ್ಧರಿಗೆ ಈ ಯೋಜನೆ ವರದಾನವಾಗಲಿದ್ದು, ಮುಂದಿನ ದಿನಗಳಲ್ಲಿ ಮನೆರಹಿತರಿಗೆ ಮನೆ ಕೊಡುವುದು, ಹಿರಿಯರ ಕಾಲದಿಂದಲೂ ಒಂದೇ ಹೆಸರಿನಲ್ಲಿರುವ ಖಾತೆಯನ್ನು ವಂಶವೃಕ್ಷದ ಅನ್ವಯ ಪವತಿ ಖಾತಿ ಮಾಡಿ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಡಿ.ಎ.ದಿವಾಕರ್ ಮಾತನಾಡಿ, ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಸೂಚನೆಯ ಮೇರೆಗೆ ಬಾಗೇಪಲ್ಲಿ ತಾಲ್ಲೂಕಿನ ಗ್ರಾಮಗಳಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳ ಮಾಹಿತಿ ಪಡೆದು ಪಿಂಚಣಿ ಆದೇಶ ಪತ್ರವನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ಮಾತನಾಡಿ, ಗೂಳೂರು ಹೋಬಳಿಯಲ್ಲಿ ಅಕ್ಟೋಬರ್ 4 ರಿಂದ ಹೆಲ್ತ್ ಕ್ಯೂಬ್ ಸಂಸ್ಥೆಯಿಂದ ಉಚಿತವಾಗಿ ಗರ್ಭಕೋಶ ತಪಾಸಣೆ ಸೇರಿದಂತೆ ವಿವಿಧ ರೀತಿಯ ಚಿಕಿತ್ಸೆ ನೀಡಲು ಗ್ರಾಮಗಳಿಗೆ ವೈದ್ಯರ ತಂಡ ಭೇಟಿ ನೀಡಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಾಯಪ್ಪ, ವ್ಯವಸಾಯ ಉತ್ಪನ್ನ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್.ಬಾಬುರೆಡ್ಡಿ, ಕೆಡಿಪಿ ಮಾಜಿ ಸದಸ್ಯ ಅಮರನಾಥರೆಡ್ಡಿ ಉಪಸ್ಥಿತರಿದ್ದರು.