Bagepalli : ತಾವೇ ಲಾರಿ ಹಾಗೂ ಅಕ್ಕಿ ಮೂಟೆಗಳನ್ನು ಬಚ್ಚಿಟ್ಟು, ಅಪರಿಚಿತರು ಕಳುವು ಮಾಡಿರುವುದಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಲಾರಿ ಚಾಲಕ ಹಾಗೂ ಲಾರಿ ಮಾಲೀಕನನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ರಾಯಚೂರಿನಿಂದ ಬೆಂಗಳೂರಿಗೆ ಲಾರಿಯಲ್ಲಿ ಸೆ.26 ರ ಸಂಜೆ 1,216 ಅಕ್ಕಿ ಮೂಟೆಗಳನ್ನು ಸಾಗಿಸಲಾಗುತ್ತಿತ್ತು. ಪರಗೋಡು ಬಳಿ ಲಾರಿ ಚಾಲಕ ವಿಶ್ರಾಂತಿ ಪಡೆಯಲು ಲಾರಿ ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಪರಿಚಿತರು ಚಾಲಕನನ್ನು ಪರಗೋಡು ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಮಲಗಿಸಿ, ಸುಮಾರು 12 ಲಕ್ಷ ರೂ ಮೌಲ್ಯದ ಲಾರಿ ಹಾಗೂ ಅದರಲ್ಲಿ ಇದ್ದ 30 ಟನ್ ಅಕ್ಕಿ ಮೂಟೆಗಳನ್ನು ಕಳವು ಮಾಡಿದ್ದಾರೆ ಎಂದು ಜೈ ಮಾರುತಿ ಟ್ರಾನ್ಸ್ಪೋರ್ಟ್ ಲಾರಿ ಮಾಲಿಕ ಉಬ್ಬಾ ಗಿಡ್ಡಯ್ಯ ಸೆ.28 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಳ್ಳತನ ಪ್ರಕರಣವನ್ನು ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವಿ.ಕೆ.ವಾಸುದೇವ್ ಮಾರ್ಗದರ್ಶನದಲ್ಲಿ, ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಡಿ.ಆರ್.ನಾಗರಾಜ, ಸಬ್‌ಇನ್‌ಸ್ಪೆಕ್ಟರ್ ಆರ್.ಗೋಪಾಲರೆಡ್ಡಿ ಅವರನ್ನು ಒಳಗೊಂಡ ತಂಡ ರಚಿಸಿದ್ದರು.
ಪ್ರಕರಣ ವಿಚಾರಣೆ ಮಾಡಲು ಮುಂದಾದ ಪೊಲೀಸರಿಗೆ ಲಾರಿ ಮಾಲೀಕನೇ ತನ್ನ ಲಾರಿಯನ್ನು ತಮಿಳುನಾಡಿನಲ್ಲಿ ಗುಜರಿಗೆ ಮಾರಿ, ಅಕ್ಕಿಯನ್ನು ಆಂದ್ರಪ್ರದೇಶದಲ್ಲಿ ಅಡಗಿಸಿಟ್ಟಿರುವುದು ತನಿಖೆಯಿಂದ ತಿಳಿದುಬಂದಿದೆ. ಕರ್ನೂಲು ಜಿಲ್ಲೆಯ ಡೋನ್ ಪಟ್ಟಣದ ಲಾರಿ ಮಾಲೀಕ ಉಬ್ಬಾ ಗಿಡ್ಡಯ್ಯ ಮತ್ತು ಜಂಬಿಗೆಮರದಹಳ್ಳಿ ಗ್ರಾಮದ ಲಾರಿಯ ಚಾಲಕ ಪ್ರದೀಪ್ ಅವರನ್ನು ವಿಚಾರಣೆ ಮಾಡಲಾಗಿದ್ದು, ಇಬ್ಬರೂ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣ ಭೇದಿಸುವಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಡಿ.ಆರ್.ನಾಗರಾಜ, ಸಬ್‌ಇನ್‌ಸ್ಪೆಕ್ಟರ್ ಆರ್.ಗೋಪಾಲರೆಡ್ಡಿ, ಅಪರಾಧ ವಿಭಾಗದ ಸಿಬ್ಬಂದಿ ಅರುಣ್, ಧನಂಜಯ್, ಅಶೋಕ, ಶಬ್ಬೀರ ಉರಾನಮನಿ, ವಿನಾಯಕ, ರಮೇಶ್, ರಾಜಪ್ಪ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ರವಿಕುಮಾರ್ ಭಾಗಿಯಾಗಿದ್ದಾರೆ. ಕಾರ್ಯಾಚರಣೆ ಮಾಡಿದ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗೆ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur