Bagepalli: ಬಾಗೇಪಲ್ಲಿ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ತಾಲ್ಲೂಕು ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿದರು.
ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದುದು. ಶಿಕ್ಷಕರು ಒಂದು ರಾಜಕೀಯ ಪಕ್ಷಕ್ಕೆ ಸೀಮಿತರಾಗಾದೆ ರಾಜಕೀಯರಹಿತರಾಗಿ ಸೇವೆಯಲ್ಲಿ ತೊಡಗಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಅವರು ಹೇಳಿದರು.
ಶಿಕ್ಷಕರ ದಿನಾಚರಣೆಯಂದು ಮಾತ್ರ ಗುರುಭವನ ನೆನಪಾಗುತ್ತದೆ. ನಂತರ ಅಧಿಕಾರಿಗಳು, ಶಿಕ್ಷಕರ ಸಂಘಟನೆಯವರು ಈ ವಿಚಾರವನ್ನು ಮರೆಯುತ್ತಾರೆ. ಗುರುಭವನ ಹಾಗೂ ಶಿಕ್ಷಕರ ಭವನ ನಿರ್ಮಿಸಲು ಸೊಚಗೆ ನೀಡಲಾಗಿದೆ. ಸೂಕ್ತ ಜಾಗ ಗುರುತಿಸಿ ಭವನ ಕಟ್ಟಿಸಲು ಮುಂದಾಗಬೇಕು. ಮುಂದಿನ ತಿಂಗಳಿನಿಂದ ಭವನ ಕಟ್ಟಿಸಲು ಯೋಜನೆ ರೂಪಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ, ಗೂಳೂರು ಹೋಬಳಿಯಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್ ಕೋರ್ಸ್ ಆರಂಭಿಸಲಾಗಿದೆ. ಸರ್ಕಾರಿ ಪಾಲಿಟೆಕ್ನಿಕ್, ಐಟಿಐ ಕಾಲೇಜುಗಳನ್ನು ಹಂತ ಹಂತದಲ್ಲಿ ಅಭಿವೃದ್ಧಿಪಡಿಸಿ, ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಕಲ್ಪಿಸಲಾಗುವುದು ಎಂದು ಹೇಳಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ. ನಯಾಜ್ ಅಹಮದ್ ಮಾತನಾಡಿ, ಶಿಕ್ಷಕರನ್ನು ಬೋಧನೆಯ ಜೊತೆಗೆ ಸಭೆಗಳು ಮತ್ತು ಯೋಜನೆಗಳ ಕಾರ್ಯಕ್ಕೆ ಬಳಕೆ ಮಾಡುತ್ತಿರುವುದರಿಂದ ಶೈಕ್ಷಣಿಕ ಪ್ರಗತಿ ಕುಂದುತ್ತದೆ ಎಂದು ಹೇಳಿದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಿ.ಎ. ದಿವಾಕರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಎನ್. ಮಂಜುನಾಥಸ್ವಾಮಿ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಡಿ.ಎನ್. ಸುಕನ್ಯಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್. ಸತ್ಯನಾರಾಯಣರೆಡ್ಡಿ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್. ಹನುಮಂತರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ವಿ. ರಂಗಾರೆಡ್ಡಿ, ಪುರಸಭಾ ಉಪಾಧ್ಯಕ್ಷ ಎ. ಶ್ರೀನಿವಾಸ್, ಸ್ಥಾಯಿಸಮಿತಿ ಅಧ್ಯಕ್ಷ ಎ. ನಂಜುಂಡಪ್ಪ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಮೀರ್ ಜಾನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರವಣಪ್ಪ, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎನ್. ನಾರಾಯಣಸ್ವಾಮಿ ಹಾಜರಿದ್ದರು.