Sidlaghatta : ವಕ್ಫ್ ಬೋರ್ಡ್ ಮೂಲಕ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುವ ಹುನ್ನಾರವನ್ನು ರಾಜ್ಯ ಸರ್ಕಾರವೇ ಪರೋಕ್ಷವಾಗಿ ಮಾಡುತ್ತಿದ್ದು ಈ ಕೂಡಲೆ ರಾಜ್ಯ ಸರ್ಕಾರವು ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ಗಳನ್ನು ವಾಪಸ್ ಪಡೆದುಕೊಳ್ಳಬೇಕೆಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಒತ್ತಾಯಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಹೆಚ್ಚು ಸದಸ್ಯತ್ವ ನೋಂದಾಯಿಸಿದ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಾವಿರಾರು ರೈತರಿಗೆ ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ನೀಡಿದ್ದು ಜಮೀನುಗಳನ್ನು ಬಿಟ್ಟು ಬಿಡುವಂತೆ 45 ದಿನಗಳ ಗಡುವು ನೀಡಲಾಗಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಯೋಜನೆ ಇದಾಗಿದೆ ಎಂದು ಆರೋಪಿಸಿದರು.
ದೇಶದ ಶಕ್ತಿ ಕೇಂದ್ರ ಸಂಸತ್ ಭವನ ಸೇರಿದಂತೆ ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣಗಳಿರುವ ಜಮೀನುಗಳು ವಕ್ಫ್ ಬೋರ್ಡ್ ಗೆ ಸೇರಿದೆ ಎಂದರೆ ಏನರ್ಥ, ಈ ಹುನ್ನಾರದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದರು.
ಕೂಡಲೆ ಸರ್ಕಾರವು ಈ ಬಗ್ಗೆ ತನಿಖೆ ನಡೆಸಬೇಕು, ವಿನಾಕಾರಣ ನೋಟಿಸ್ ಕೊಟ್ಟವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು, ರೈತರಿಗೆ ಧೈರ್ಯ ತುಂಬುವ ಕೆಲಸ ಆಗಬೇಕು. ಇಲ್ಲವಾದಲ್ಲಿ ಬಿಜೆಪಿಯಿಂದ ಇಡೀ ರಾಜ್ಯದ ಉದ್ದಕ್ಕೂ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿ ಬಿಜೆಪಿಯು ಅನ್ನದಾತನ ಪರ ನಿಲ್ಲಲಿದೆ. ರೈತರಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ದ ಎಂದು ಹೇಳಿದರು.
ಕೊತ್ತನೂರು ಗ್ರಾಮದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳು, ಯೋಜನೆಗಳ ಕರಪತ್ರ ಹಂಚಿ ಬಿಜೆಪಿಯ ಸದಸ್ಯತ್ವವನ್ನು ನೋಂದಾಯಿಸಲಾಯಿತು.
1,200 ಸದಸ್ಯರನ್ನು ನೋಂದಾಯಿಸಿದ ಬಿಜೆಪಿ ಎಸ್.ಟಿ ಮೋರ್ಚಾದ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ಹೆಚ್ಚು ಸದಸ್ಯರನ್ನು ನೋಂದಾಯಿಸಿದವರನ್ನು ಸನ್ಮಾನಿಸಲಾಯಿತು.
ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಮಾಜಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಕೊತ್ತನೂರು ಜಗದೀಶ್, ರವಿ, ಮಧು, ರಾಮಕೃಷ್ಣಪ್ಪ, ಪುರುಷೋತ್ತಮ್ ಹಾಜರಿದ್ದರು.