Kolar : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ (Bangalore North University) 4ನೇ ವಾರ್ಷಿಕ ಘಟಿಕೋತ್ಸವವನ್ನು (BNU convocation) ಸೋಮವಾರ ಕೋಲಾರ ನಗರ ಹೊರವಲಯದ ನಂದಿನಿ ಪ್ಯಾಲೇಸ್‍ನಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ “ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ನಮ್ಮ ಸರ್ಕಾರಕ್ಕೆ ಪ್ರಸ್ತಾವ ಬಂದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡುವುದು ಬೇಡವೆಂದಿದ್ದಾರೆ. ಸರ್ಕಾರಿ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿರುವ ಖಾಸಗಿ ಕಾಲೇಜುಗಳು ಖಾಸಗಿ ವಿಶ್ವವಿದ್ಯಾಲಯ ಸುಪರ್ದಿಗೆ ಹೋದರೆ ಮುಂದೆ ಸರ್ಕಾರಿ ವಿಶ್ವವಿದ್ಯಾಲಯಗಳು ಬರೀ ಪ್ರಮಾಣ ಪತ್ರ ಕೊಡಲು ಸೀಮಿತವಾಗುತ್ತವೆ, ಸಂಶೋಧನೆ ಕುಂಠಿತಗೊಳ್ಳುತ್ತದೆ. ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಪದವಿ ವಿಭಾಗದ ಹಲವು ಕೋರ್ಸ್‍ಗಳಲ್ಲಿ ಬದಲಾವಣೆ ತರಲಾಗುತ್ತಿದೆ. ತಾಂತ್ರಿಕ ಶಿಕ್ಷಣದಲ್ಲಿ ಕೈಗಾರಿಕಾ ಸ್ನೇಹಿ ವಿಷಯ ಅಳವಡಿಸಲಾಗುತ್ತಿದೆ. ಕೌಶಲಾಧಾರಿತ ವಿಷಯಗಳನ್ನು ಪಠ್ಯದಲ್ಲಿ ಸೇರಿಸಲಾಗುತ್ತಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ಬಿ.ವಿ.ವೆಂಕಟಗಿರಿಯಪ್ಪ (ನಾಟಕ, ಜಾನಪದ ಕ್ಷೇತ್ರ), ಆಂಧ್ರ ಮೂಲದ ಡಿ.ಎ.ಕಲ್ಪಜಾ (ವೈದ್ಯಕೀಯ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕ್ಷೇತ್ರ) ಹಾಗೂ ಬೆಂಗಳೂರಿನ ಪ್ರೊ.ಕೆ.ಎಸ್.ಅನಂತ ಕೃಷ್ಣ (ವಾಸ್ತುಶಿಲ್ಪ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರ) ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಅಭ್ಯರ್ಥಿಗಳಿಗೆ ಚಿನ್ನದ ಪದಕ ಹಾಗೂ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.
ಕುಲಪತಿ ಪ್ರೊ.ನಿರಂಜನ ವಾನಳ್ಳಿ , ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ.ತಿಪ್ಪೇಸ್ವಾಮಿ, ಪ್ರಭಾರ ಕುಲಸಚಿವೆ (ಆಡಳಿತ) ಪ್ರೊ.ಡಿ.ಕುಮುದಾ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಬಾಜ್ ಪಾಷಾ, ವೆಂಕಟೇಶಪ್ಪ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.