Chikkaballapur: ಹೆಚ್ಚು ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರ (Covid Care Centre ) ಗಳಲ್ಲಿ ಚಿಕಿತ್ಸೆ ನೀಡಿಕೆ, ಲಸಿಕೆ ನೀಡಿಕೆ ಉತ್ತಮಗೊಳಿಸಿರುವುದು ಮತ್ತು ಜಿಲ್ಲಾ ಸಂಪೂರ್ಣ ಲಾಕ್‌ಡೌನ್‌ಗೆ ಸಾರ್ವಜನಿಕರು ಜಿಲ್ಲಾಡಳಿತದ ಜತೆ ಸಕಾರಾತ್ಮಕವಾಗಿ ಸ್ಪಂದಿಸಿದ ಪರಿಣಾಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಶೇ 11ಕ್ಕೆ ಇಳಿಕೆ ಕಂಡಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಪ್ರಸ್ತುತ ಜಿಲ್ಲೆಯಲ್ಲಿಯೇ ಅತಿ ಕಡಿಮೆ (235) ಸಕ್ರಿಯ ಪ್ರಕರಣಗಳಿರುವ ಗುಡಿಬಂಡೆ ತಾಲ್ಲೂಕನ್ನು ಮೊದಲು ಕೊರೊನಾ ಮುಕ್ತಗೊಳಿಸಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈ ತಿಂಗಳ ಅಂತ್ಯದೋಳಗೆ ಇಡೀ ಜಿಲ್ಲೆಯನ್ನು ಕೊರೊನಾ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಕೋವಿಡ್ ಪರಿಸ್ಥಿತಯ ಕುರಿತು ಮಾಹಿತಿ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇದುವರೆಗೆ
ಕೊರೊನಾದಿಂದ ಮಕ್ಕಳ ಒಂದೇ ಒಂದು ಸಾವಿನ ಪ್ರಕರಣ ಜಿಲ್ಲೆಯಲ್ಲಿ ಇಲ್ಲಿಯವರೆಗೂ ದಾಖಲಾಗಿಲ್ಲ. ಇದು ಉತ್ತಮ ಸಾಧನೆಯಾಗಿದೆ ಎಂದು ತಿಳಿಸಿದರು.
ಗ್ರಾಮ ಮತ್ತು ನಗರ ಪ್ರದೇಶಗಳ ಕೋವಿಡ್ ಟಾಸ್ಕ್‌ಫೋರ್ಸ್ ಸಮಿತಿಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಕೊರೊನಾ ನಿಯಂತ್ರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ನಿರಂತರವಾಗಿ 10 ರ ಸ್ಥಾನದ ಒಳಗೆ ಬರುತ್ತಿರುವುದೇ ಸಾಕ್ಷಿಯಾಗಿದೆ. ಮೇ 24 ರಿಂದ 30 ರ ಅವಧಿಯಲ್ಲಿ ಜಿಲ್ಲೆಯ ಒಟ್ಟಾರೆ ಸೋಂಕಿನ ಪ್ರಮಾಣ ಶೇ 13.64 ದಾಖಲಿಸುವ ಮೂಲಕ ಜಿಲ್ಲೆಯು ರಾಜ್ಯದಲ್ಲಿ 8 ನೇ ಸ್ಥಾನ ಗಳಿಸಿದೆ ಎಂದರು.
ಕೋವಿಡ್ 2ನೇ ಅಲೆಯ ಆರಂಭದಲ್ಲಿ ಶೇ 35 ರ ಆಸುಪಾಸಿನಲ್ಲಿ ಸೋಂಕಿತರ ಪ್ರಮಾಣವಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿ ದಿನ ಸಾವಿರದ ಸಮೀಪ ಸೋಂಕಿನ ಪ್ರಕರಣಗಳು ದಾಖಲಾಗುತ್ತಿದ್ದವು. ಅಂತಹ ಸಂದಿಗ್ದ ಸಮಯದಲ್ಲಿ ಜಿಲ್ಲಾಡಳಿತದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹೆಚ್ಚಿನ ಕಾರ್ಯಭಾರ ಹಂಚಿಕೆ ಮಾಡಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣವನ್ನು ಶೇ 5ಕ್ಕೆ ತಗ್ಗಿಸಲು ಗುರಿ ಹೊಂದಲಾಗಿತ್ತು. ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ವೈದ್ಯರು, ದಾದಿಯರು ಮತ್ತು ಸಹಾಯಕ ಸಿಬ್ಬಂದಿ ಹಾಗೂ ಸ್ಥಳೀಯ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರು , ಆಶಾ ಕಾರ್ಯಕರ್ತೆಯರ ಸೇವೆಗೆ ಜಿಲ್ಲಾಡಳಿತ ಆಭಾರಿಯಾಗಿದೆ ಎಂದು ಹೇಳಿದರು.
ಇಶಾ ಫೌಂಡೇಷನ್, ಸತ್ಯ ಸಾಯಿ ಲೋಕಾ ಸೇವಾ ಟ್ರಸ್ಟ್, ಆದಿಚುಂಚನ ಗಿರಿ ಮಠದ ಟ್ರಸ್ಟ್, ಜೈನ್ ಟ್ರಸ್ಟ್, ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಮತ್ತಿತರ ಸರ್ಕಾರೇತರ ಸಂಸ್ಥೆಗಳು ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಿದರು ಎಂದು ತಿಳಿಸಿದರು.
Your email address will not be published. Required fields are marked *
Save my name, email, and website in this browser for the next time I comment.
2021 Chikkaballapur.com