ಸೆ.17 ರಂದು ಆಯೋಜಿಸಲಾಗಿದ್ದ ವಿಶೇಷ ಲಸಿಕಾ ಮೇಳದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಒಂದೇ ದಿನ ಒಟ್ಟು 88,570 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.
ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡಲು ಜಿಲ್ಲಾಡಳಿತ ಪಣ ತೊಟ್ಟಿದೆ. ಜಿಲ್ಲೆಯಾದ್ಯಂತ ಕೋವಿಡ್-೧೯ ಲಸಿಕೆ ಹಾಕುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ವಿಶೇಷ ಲಸಿಕಾ ಮೇಳ, ಲಸಿಕಾ ಉತ್ಸವ ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಲಸಿಕೆ ನೀಡಲಾಗುತ್ತಿದ್ದು, ಸೆ.17 ರ ಈ ಸಾಧನೆಯಿಂದಾಗಿ ಜಿಲ್ಲೆ ಶೇ 100 ರಷ್ಟು ಲಸಿಕೆ ನೀಡುವ ಗುರಿ ಸಾಧಿಸಲು ಜಿಲ್ಲಾಡಳಿತಕ್ಕೆ ಮತ್ತಷ್ಟು ಪ್ರೇರಣೆ ದೊರೆತಿದೆ ಎಂದು ಹೇಳಿದರು.
ಸೆ.1ರ ರಂದು 50,428 ಡೋಸ್, ಸೆ.14 ರಂದು 70 ಸಾವಿರ ಡೋಸ್, ಸೆ.17ರಂದು 88,570 ಡೋಸ್ ಲಸಿಕೆ ಹಾಕಲಾಗಿದೆ. ಜಿಲ್ಲೆಯನ್ನು ಆದಷ್ಟು ಬೇಗ ಶೇ 100 ರಷ್ಟು ಲಸಿಕಾಕರಣ ಸಾಧಿಸಿದ ಜಿಲ್ಲೆಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದುವರೆಗೆ ಒಟ್ಟು 10,96,955 ಡೋಸ್ ಲಸಿಕೆ ನೀಡಲಾಗಿದ್ದು, ಈ ಪೈಕಿ 7,74,986 ಮೊದಲ ಡೋಸ್ ಮತ್ತು 3,21,969 ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 9,63,038 ಜನರಿಗೆ ಎರಡೂ ಡೋಸ್ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.