Chikkaballapur :
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಬಹುತೇಕ ಕೆರೆಗಳು ಕೋಡಿ ಹರಿದಿದೆ. ಚಿಕ್ಕಬಳ್ಳಾಪುರದ ಕಂದವಾರ ಕೆರೆ, ಅಮಾನಿ ಗೋಪಾಲಕೃಷ್ಣ ಕೆರೆ, ಚಿತ್ರಾವತಿ ಡ್ಯಾಮ್ ಸಂಪೂರ್ಣ ಭರ್ತಿಯಾಗಿದ್ದು ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ನೀರು ಹರಿಯುವ ಕಾಲುವೆಯು ಕುಸಿಯುವ ಭೀತಿಯಿಂದ ಬಿಬಿ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಿದ್ದು ನಗರದ ಬಿಬಿ ರಸ್ತೆಯ ಹರ್ಷೋದಯ ಮತ್ತು ಗುರುರಾಜ ಕಲ್ಯಾಣ ಮಂಟಪ ಪೂರ್ಣವಾಗಿ ಮಳೆಯಿಂದ ಜಲಾವೃತವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದು ತಿಂಗಳಿಂದ ಸುರಿದ ಭಾರಿ ಮಳೆಗೆ ಅಪಾರ ಅಸ್ತಿ ನಷ್ಟವಾಗಿದೆ. ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ರೈತರು ಬೆಳೆದ ರಾಗಿ ಮತ್ತು ಶೇಂಗಾ ಕಟಾವು ಮಾಡಲು ಕಷ್ಟವಾಗುತ್ತಿದ್ದು ಸುಮಾರು ₹23 ಕೋಟಿಗೂ ಹೆಚ್ಚು ಬೆಳೆ ನಷ್ಟ ಸಂಭವಿಸಿದೆ ಎಂದು ಜಿಲ್ಲಾಢಳಿತ ಅಂದಾಜಿಸಲಾಗಿದೆ. 905 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿ ಆಗಿದ್ದು ₹19.72 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೃಷಿ ಇಲಾಖೆಯ ಸಮೀಕ್ಷೆಯಲ್ಲಿ 5,032 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಇದರ ಒಟ್ಟು ಮೌಲ್ಯ ₹2.66 ಕೋಟಿ ಎಂದು ಇಲಾಖೆ ತಿಳಿಸಿದೆ.
ಗುಡಿಬಂಡೆ :
ಗುಡಿಬಂಡೆ ತಾಲ್ಲೂಕಿನ 94 ಕೆರೆಗಳು ಭರ್ತಿಯಾಗಿದ್ದು ಸುರಸದ್ಮಗಿರಿ ಬೆಟ್ಟದ ಪುರಾತನ ಕೋಟೆ ಬುರುಜು ಬಿದ್ದಿದೆ. ತಾಲ್ಲೂಕಿನಾದ್ಯಂತ 22 ಮನೆ ಕುಸಿತವಾಗಿದೆ ಎಂದು ದಾಖಲಾಗಿದೆ. ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಕೆರೆ ಕೋಡಿ ಉದ್ದಕ್ಕು ನೀರು ರಭಸದಿಂದ ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.
ಗೌರಿಬಿದನೂರು :
ಗೌರಿಬಿದನೂರು ತಾಲ್ಲೂಕಿನ ಮೇಳ್ಯ ಕೆರೆ, ಕಸಬಾ ಹೋಬಳಿಯ ಕಲ್ಲೂಡಿ ಕೆರೆ, ತೊಂಡೇಬಾವಿ ಹೋಬಳಿ ವ್ಯಾಪ್ತಿಯಲ್ಲಿನ ತಿಪ್ಪಗಾನಹಳ್ಳಿ ಕೆರೆ ಹಾಗೂ ಮಂಚೇನಹಳ್ಳಿ ಕೆರೆಗೆ ನೀರಿನ ಒಳಹರಿವು ಹೆಚ್ಚಾಗಿ ಕೋಡಿ ಹರಿದಿದ್ದು ಸಾಕಷ್ಟು ನೀರು ಕೆರೆಯಿಂದ ಹೊರ ಬರುತ್ತಿದೆ.
ಮಂಚೇನಹಳ್ಳಿ ಬಳಿ ಉತ್ತರ ಪಿನಾಕಿನಿ ನದಿ ರಭಸವಾಗಿ ಹರಿಯುತ್ತಿರುವ ಕಾರಣ ಸಮೀಪದ ಸೇತುವೆಯೊಂದು ಶಿಥಿಲಾವಸ್ಥೆಗೆ ತಲುಪಿದೆ. ಮಂಚೇನಹಳ್ಳಿಯಿಂದ ತೊಂಡೇಬಾವಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದೆ.
ಅಪಾರ ಮಳೆಯಿಂದ ಇದುವರೆಗೆ ಗೌರಿಬಿದನೂರು ತಾಲ್ಲೂಕಿನಾದ್ಯಂತ ಸುಮಾರು 400ಕ್ಕೂ ಹೆಚ್ಚು ಮನೆಗಳು ಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸುವ ಕಾರ್ಯ ಸ್ಥಳೀಯ ಗ್ರಾ.ಪಂ ಯಿಂದ ಮಾಡಲಾಗುತ್ತಿದೆ ಎಂದು ಇಒ ಎನ್.ಮುನಿರಾಜು ತಿಳಿಸಿದರು.
ಚಿಂತಾಮಣಿ :
ಚಿಂತಾಮಣಿ ನಗರ ಹಾಗೂ ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದ ಹಲವಾರು ಕೆರೆಗಳು ತುಂಬಿ ಕೋಡಿ ಹರಿದಿವೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾಪತಿಮ್ಮನಹಳ್ಳಿ ಸಮೀಪ ಪಾಪಾಗ್ನಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿಕೊಂಡು ಹೋಗಿದ್ದು ಆ ರಸ್ತೆಯ ಮೂಲಕ ಹೋಗಬೇಕಾಗಿದ್ದ ಅನೇಕ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಕೈವಾರ ಹೋಬಳಿಯ ಹಿರೇಪಾಳ್ಯ ಗ್ರಾಮದಲ್ಲಿ 15 ಮನೆಗಳು ಕುಸಿದಿರುವುದು ದಾಖಲೆಯಾಗಿದೆ. ಊಲವಾಡಿ ಗ್ರಾಮ ಪಂಚಾಯಿತಿಯ ಹೆಬ್ಬರಿ ಗ್ರಾಮದ ಮಧ್ಯದಲ್ಲಿರುವ ಕಲ್ಯಾಣಿ, ಮುನುಗನಹಳ್ಳಿ, ಊಲವಾಡಿ, ನಂದಿಗಾನಹಳ್ಳಿ, ಕೈವಾರ, ಮುಂಗಾನಹಳ್ಳಿ ದೊಡ್ಡಕೆರೆ, ಗೌನಹಳ್ಳಿ ಕೆರೆ ಬಹುತೇಕ ತುಂಬಿದೆ.
ಶಿಡ್ಲಘಟ್ಟ :
ಶಿಡ್ಲಘಟ್ಟ ತಾಲ್ಲೂಕಿನೆಲ್ಲೆಡೆ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳು ನೀರು ತುಂಬಿ ನಳನಳಿಸುತ್ತಿವೆ.
ನಗರದ ಹೊರವಲಯದ ಅಮ್ಮನಕೆರೆ ಸೇರಿದಂತೆ ತಾಲ್ಲೂಕಿನ ಹಲವಾರು ಕೆರೆಗಳಲ್ಲಿ ನೀರು ತುಂಬಿರುವುದರಿಂದ ಕೆರೆ ಏರಿಯಲ್ಲಿ ಸಂಚಾರಕ್ಕೆ ತೊಂದರೆಯಾಗದ ಹಾಗೆ ಮತ್ತು ಅಡೆತಡೆ ಇಲ್ಲದೆ ಅವಘಡಗಳು ಸಂಭವಿಸುವ ಕಡೆಗಳಿಗೆ ತಹಶೀಲ್ದಾರ್ ರಾಜೀವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇಲೂರು ಬಳಿಯ ಕಟ್ಟು ಕಾಲುವೆಯಲ್ಲಿ ನೀರು ರಭಸದಿಂದ ಹರಿಯುತ್ತಿದೆ. ಕೇಶವಪುರದ ಕೆರೆಗೆ ತೂಬನ್ನು ಸರಿಯಾಗಿ ನಿರ್ಮಿಸದ ಕಾರಣ ನೀರು ಕೆರೆಯಲ್ಲಿ ನಿಲ್ಲದೆ ವ್ಯರ್ಥವಾಗಿ ಹರಿದುಹೋಗುತ್ತಿದೆ.
ಬಾಗೇಪಲ್ಲಿ:
ಜಿಲ್ಲೆಯಾದ್ಯಂತ ಬಿದ್ದ ಭಾರಿ ಮಳೆಗೆ ವರದಯ್ಯಗಾರಿಪಲ್ಲಿ-ಭೋಗೇಪಲ್ಲಿ ಮಧ್ಯೆ ಹರಿಯುವ ಚಿತ್ರಾವತಿ ಸೇತುವೆ ಒಡೆದದ್ದರಿಂದ ಪರಗೋಡು ಬಳಿಯ ಚಿತ್ರಾವತಿ ಅಣೆಕಟ್ಟಿಗೆ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ಬಾಗೇಪಲ್ಲಿ ಪಟ್ಟಣಕ್ಕೆ ಸಂಪರ್ಕಿಸುವ 2 ಚಿತ್ರಾವತಿಯ ಮೇಲುಸೇತುವೆಗಳ ಮೇಲೆ ನೀರು ರಭಸವಾಗಿ ಹರಿದಿದ್ದು, ಜನರ ಹಾಗೂ ವಾಹನಗಳ ಸಂಪರ್ಕ ಕಡಿತವಾಗಿದೆ.
ಬಾಗೇಪಲ್ಲಿ ಪಟ್ಟಣದ ಸಂತೇಮೈದಾನ ರಸ್ತೆ ಹಾಗೂ ಟಿ.ಬಿ.ಕ್ರಾಸ್‌ನಿಂದ-ಪಟ್ಟಣಕ್ಕೆ ಸಂಪರ್ಕಿಸುವ 2 ಮುಖ್ಯರಸ್ತೆಗಳಲ್ಲಿ ಸಂಚಾರ ಕಡಿತಗೋಂದಿರುವುದರಿಂದ ಪಟ್ಟಣದಿಂದ ಬೆಂಗಳೂರು, ಚಿಕ್ಕಬಳ್ಳಾಪುರ, ಗೌರಿಬಿದನೂರು, ಆಂಧ್ರಪ್ರದೇಶದ ಕಡೆಗೆ ಸಂಚರಿಸುವ ಮಾರ್ಗದ ಪ್ರಯಾಣಿಕರ ಸಂಚಾರ ಕಷ್ಟಕರವಾಗಿದೆ.