Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಭಾನುವಾರ ವರನಟ ಡಾ. ರಾಜ್ ಕುಮಾರ್ (Dr. Rajkumar) ಅವರ ಜನ್ಮದಿನ ಆಚರಣೆಯ (Birth Anniversary) ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಪನ್ಯಾಸಕರಾದ ಸತೀಶ್, ರಾಜ್ ಕುಮಾರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಪಿ.ಶಿವಶಂಕರ್ “ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಸಂಗೀತ ಕ್ಷೇತ್ರ ಹಾಗೂ ಚಿತ್ರರಂಗಕ್ಕೆ ರಾಜ್ ಕುಮಾರ್ ಅವರು ಅಪಾರ ಕೊಡುಗೆ ನೀಡಿದರು. ಕನ್ನಡವನ್ನು ಹೆಚ್ಚು ಸ್ಪಷ್ಟವಾಗಿ ಮಾತನಾಡುವ ಹಾಗೂ ನಟನೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದವರು ರಾಜ್ ಕುಮಾರ್. ಬೇಡರ ಕಣ್ಣಪ್ಪ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ಬಬ್ರುವಾಹನ , ಕಸ್ತೂರಿ ನಿವಾಸ, ಗಂಧದ ಗುಡಿ, ಮಯೂರ ,ಬಂಗಾರದ ಮನುಷ್ಯ ಸಿನಿಮಾಗಳು ಎಷ್ಟೋ ಜನರ ಬದುಕನ್ನು ಬದಲಿಸಿವೆ” ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್ , ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಮಂಜುನಾಥ್ , ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.