Chikkaballapur : ಚಿಕ್ಕಬಳ್ಳಾಪುರ: ಜಿಲ್ಲೆಯ ಆಹಾರ ಸಂಸ್ಕೃತಿಯನ್ನು ಮರುಪರಿಚಯಿಸಲು ಮತ್ತು ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸಲು ಚಿಕ್ಕಬಳ್ಳಾಪುರ ಜಿಲ್ಲಾ ಕೃಷಿ ಇಲಾಖೆಯು ಜಿಲ್ಲಾ ಮಟ್ಟದ ‘ಸಿರಿಧಾನ್ಯ’ ಮತ್ತು ‘ಮರೆತು ಹೋದ ಖಾದ್ಯಗಳ’ ಪಾಕ ಸ್ಪರ್ಧೆಯನ್ನು ಆಯೋಜಿಸಿದೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಈ ವಿಶಿಷ್ಟ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ.
ಸ್ಪರ್ಧೆಯ ವಿಭಾಗಗಳು ಮತ್ತು ಬಹುಮಾನ: ಈ ಪಾಕ ಸ್ಪರ್ಧೆಯಲ್ಲಿ ಪ್ರಮುಖವಾಗಿ ಮೂರು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವವರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುತ್ತದೆ.
- ಪ್ರಥಮ ಬಹುಮಾನ: ₹ 5,000
- ದ್ವಿತೀಯ ಬಹುಮಾನ: ₹ 3,000
- ತೃತೀಯ ಬಹುಮಾನ: ₹ 2,000 (ಸಿಹಿ, ಖಾರ – ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ ಮತ್ತು ಮರೆತು ಹೋದ ಖಾದ್ಯಗಳ ತಿನಿಸುಗಳಿಗೆ ಈ ಬಹುಮಾನ ಅನ್ವಯಿಸುತ್ತದೆ).
ಅರ್ಜಿ ಸಲ್ಲಿಸುವ ವಿಧಾನ: ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ, ತಯಾರಿಸುವ ಖಾದ್ಯದ ಹೆಸರು, ಬೇಕಾಗುವ ಸಾಮಗ್ರಿಗಳು, ತಯಾರಿಕಾ ಸಮಯ ಮತ್ತು ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡ ಅರ್ಜಿಯನ್ನು ಡಿಸೆಂಬರ್ 24 ರೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಅರ್ಜಿಗಳನ್ನು ಇ-ಮೇಲ್ ಮೂಲಕ (jdacbp2025@yahoo.com ಅಥವಾ jdacbp@gmail.com) ಕಳುಹಿಸಬಹುದು. ಅಥವಾ ಖುದ್ದಾಗಿ/ಅಂಚೆ ಮೂಲಕ ‘ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೆ.ಎಸ್.ಎಸ್.ಸಿ ಕಚೇರಿ ಆವರಣ, ಬಿ.ಬಿ ರಸ್ತೆ, ಚಿಕ್ಕಬಳ್ಳಾಪುರ-562101’ ಈ ವಿಳಾಸಕ್ಕೆ ತಲುಪಿಸಬಹುದು.
ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಬಂದು ಡಿಸೆಂಬರ್ 29 ರಂದು ಬೆಳಿಗ್ಗೆ 10 ಗಂಟೆಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
