Chikkaballapur : ತಾಲ್ಲೂಕಿನ ಕಳವಾರ ಗ್ರಾಮದಲ್ಲಿ ಮೇ 26 ರಂದು ನಡೆದ ಸರಗಳ್ಳತನ ಪ್ರಕರಣವನ್ನು ಪೊಲೀಸರು ಬಗೆಹರಿಸಿದ್ದು, ಈ ಸಂಬಂಧ ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದ ಗೋವಿಂದ್ (30) ಮತ್ತು ಅಶ್ವಿನಿ (19) ಎಂಬವರನ್ನು ಬಂಧಿಸಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಆರೋಪಿಗಳಿಂದ ಒಟ್ಟು 49 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ, 760 ಮಿಲಿಗ್ರಾಂ ತೂಕದ ಎರಡು ಬಂಗಾರದ ಗುಂಡುಗಳು, 8 ಗ್ರಾಂ ತೂಕದ ಬಂಗಾರದ ತಾಳಿ ಹಾಗೂ ನೋಂದಣಿ ಇಲ್ಲದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ಗೋವಿಂದ್ ಮಧುಗಿರಿಯಲ್ಲೂ ಕಳವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದರೆಂದು ತಿಳಿದುಬಂದಿದೆ.
ಮೇ 26ರಂದು ಮಧ್ಯಾಹ್ನ, ಕಳವಾರ ಗ್ರಾಮದ ಆಂಜಿನಮ್ಮ ಅವರು ಗಂಟಿಗಾನಹಳ್ಳಿ ಗ್ರಾಮದ ಬಳಿಯ ತಮ್ಮ ಜಮೀನಿನಲ್ಲಿ ನಿರ್ಮಿಸುತ್ತಿದ್ದ ಕೊಠಡಿಗೆ ತೆರಳುತ್ತಿದ್ದಾಗ, ಮಳೆ ಸುರಿಯುತ್ತಿದ್ದ ವೇಳೆ ಆರೋಪಿಗಳು ಅವರನ್ನು ಹಿಂಬಾಲಿಸಿ ದಾಳಿ ನಡೆಸಿದ್ದರು. ಸೀರೆ ತುರುಕಿನಿಂದ ಬಾಯಿ ಮುಚ್ಚಿ, ಹಗ್ಗದಿಂದ ಕಾಲುಗಳನ್ನು ಕಟ್ಟಿ ಹಾಕಿ ಅವರ ಮಾಂಗಲ್ಯ ಸರ ದೋಚಲಾಗಿತ್ತು. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಎಸ್‌ಪಿ ಕುಶಾಲ್ ಚೌಕ್ಸೆ, ಎಎಸ್‌ಪಿ ಜಗನ್ನಾಥ್ ರೈ, ಡಿವೈಎಸ್‌ಪಿ ಎಸ್. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸಿಪಿಐ ಮಂಜುನಾಥ್ ಎಂ., ಪಿಎಸ್‌ಐ ಹರೀಶ್ ಕುಮಾರ್ ಡಿ. ಹಾಗೂ ಸಿಬ್ಬಂದಿ ರವಿಕುಮಾರ್, ರವೀಂದ್ರ ಕುಮಾರ್, ನವೀನ್ ಬಾಬು, ವಿಜಯ್ ಕುಮಾರ್, ವೆಂಕಟೇಶಮೂರ್ತಿ, ಪವಿತ್ರಾ ಕೊಠಾರಿ, ಮುನಿಕೃಷ್ಣ, ಹೇಮಂತ್ ಕುಮಾರ್, ಮೋಹನ್ ಸೇರಿ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ್ದಾರೆ.