Chintamani : ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿಯ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ (Morarji Desai Residential School for Minorities) ಸೋಮವಾರ ಬೆಳಿಗ್ಗೆ ತಿಂಡಿ ಸೇವನೆಯ ನಂತರ ಕೆಲವು ಮಕ್ಕಳು ಅಸ್ವಸ್ಥಗೊಂಡು ಆತಂಕ ಮೂಡಿಸಿದರು.
ಸುದ್ಧಿ ತಿಳಿದ ತಕ್ಷಣ ತಹಶೀಲ್ದಾರ್ ಹನುಮಂತರಾಯಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಪೂರ್ಣಿಮಾ ಹಾಗೂ ಇತರೆ ಅಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು. ಹೊಟ್ಟೆನೋವು ಮತ್ತು ವಾಂತಿ ಮಾಡಿಕೊಂಡು ಬಳಲುತ್ತಿದ್ದ ಮಕ್ಕಳಿಗೆ ವೈದ್ಯರು ಅಲ್ಲೇ ಗ್ಲೂಕೋಸ್ ಹಾಕಿ ಚಿಕಿತ್ಸೆ ನೀಡಿದರು.
ಪಲಾವ್ ಗೆ ಹಾಕಿದ ಸೋಯಾ ಚಂಕ್ಸ್ ನಲ್ಲಿ ಹುಳ ಕಾಣಿಸಿದ್ದವು. ಕೆಲವರಿಗೆ ಬಡಿಸಿದ ನಂತರ ಅಡಿಗೆಯ ಸಿಬ್ಬಂದಿಯೇ ಗಮನಿಸಿ ನಂತರ ಉಳಿದವರಿಗೆ ಬೇರೆ ತಿಂಡಿಯನ್ನು ಮಾಡಿ ಬಡಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಈಗ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸ್ವಾತಿ ತಿಳಿಸಿದರು.