Chintamani : ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ (Murugamalla) ಹೋಬಳಿಯ ನಂದಿಗಾನಹಳ್ಳಿ (Nandiganahalli) ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಗ್ರಾಮೀಣ ಉಗ್ರಾಣ ಕಟ್ಟಡವನ್ನು (Store Room) ರಾಜ್ಯ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ (Dr M C Sudhakar) ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು “ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಪಿಯುಸಿವರೆಗೂ ಆಂಗ್ಲ ಮಾಧ್ಯಮದಲ್ಲಿ ಓದಲು ಅನುಕೂಲ ಕಲ್ಪಿಸಲಾಗಿರುವ ಏಕಲವ್ಯ ವಸತಿ ಶಾಲೆ ನಿರ್ಮಾಣಕ್ಕಾಗಿ ಚಿಂತಾಮಣಿ ತಾಲ್ಲೂಕಿನಲ್ಲಿ ಸ್ಥಳ ಗುರುತಿಸಲಾಗಿದ್ದು ಶೀಘ್ರವೇ ನಿರ್ಮಾಣದ ಕಾಮಗಾರಿ ಆರಂಭವಾಗಲಿದೆ. ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಹಾಗೂ ಇತರೆ ಉತ್ಪನ್ನಗಳನ್ನು ಗ್ರಾಮೀಣ ಉಗ್ರಾಣದಲ್ಲಿ ದಾಸ್ತಾನು ಮಾಡಿ ಸೂಕ್ತ ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಲಕ್ಷ್ಮಿನಾರಾಯಣರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್.ನಾಗಿರೆಡ್ಡಿ, ಕೃಷಿಕ ಸಮಾಜದ ಉಪಾಧ್ಯಕ್ಷ ಪಟೇಲ್ ಅಶ್ವತ್ಥನಾರಾಯಣರೆಡ್ಡಿ, ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು, ಕೃಷ್ಣಪ್ಪ ಮತ್ತಿತ್ತರರು ಉಪಸ್ಥಿತರಿದ್ದರು.