Chintamani : ಚಿಂತಾಮಣಿ ನಗರದ ಹೊರವಯಲದ ಕೋನಪ್ಪಲ್ಲಿ ಬಳಿ ಬುಧವಾರ ನೂತನ ಪ್ರಾದೇಶಿಕ ಸಾರಿಗೆ ಕಚೇರಿಯನ್ನು (RTO Building Inauguration) ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ “ಚಿಂತಾಮಣಿ ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಶೀಘ್ರದಲ್ಲೇ ಮಂಜೂರಾತಿ ನೀಡಲಾಗುವುದು. ಶಕ್ತಿ ಯೋಜನೆಯ ನಂತರ ರಾಜ್ಯದಲ್ಲಿ ಪ್ರತಿನಿತ್ಯ 20 ಲಕ್ಷ ಜನರು ಸಂಚರಿಸುತ್ತಿದ್ದು ಅದಕ್ಕೆ ಪೂರಕವಾಗಿ ಬಸ್ ಖರೀದಿ, ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ. ವಿವಿಧೆಡೆ ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೇ ಅಭಿವೃದ್ಧಿ ಯೋಜನೆಗಳಿಗೂ ಆದ್ಯತೆ ನೀಡಲಾಗುತ್ತಿದೆ” ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂಸಿ.ಸುಧಾಕರ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಾರಿಗೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.