Wednesday, September 11, 2024
HomeSidlaghattaತಲೆಗೆ ಕಾಯಿ ಒಡೆಸಿಕೊಳ್ಳುವ “ತೆಂಗಿನಕಾಯಿ ಪವಾಡ”

ತಲೆಗೆ ಕಾಯಿ ಒಡೆಸಿಕೊಳ್ಳುವ “ತೆಂಗಿನಕಾಯಿ ಪವಾಡ”

- Advertisement -
- Advertisement -
- Advertisement -
- Advertisement -

Sidlaghatta : ಜಾನಪದ ಆಚರಣೆಗಳು ವೈವಿದ್ಯಮಯ. ಅವುಗಳಲ್ಲಿ ಕೆಲವು ನೋಡಲು ಮೈನವಿರೇಳಿಸುವಂತೆ ಭೀಭತ್ಸವಾಗಿರುತ್ತವೆ. ಇಂಥಹ ವಿಶಿಷ್ಟವಾದ ಜನಪದ ಆಚರಣೆ “ತೆಂಗಿನಕಾಯಿ ಪವಾಡ”. ಕುರುಬ ಜನಾಂಗದವರು ನಡೆಸುವ ಈ ಜಾನಪದ ಕಲೆಯು ದೈವಾರಾಧಕ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಚಿಕ್ಕವರಿಂದ ಹಿಡಿದು ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವ ದೃಶ್ಯ ಎಂಥವರಿಗಾದರೂ ಮೈನವಿರೇಳಿಸುವಂಥದ್ದು.

ಶಿಡ್ಲಘಟ್ಟದ ಮಾರಮ್ಮ ದೇವಿ ವೃತ್ತದಲ್ಲಿನ ಕನಕ ಭಜನೆ ಮಂದಿರದಲ್ಲಿ ಗುರುವಾರ ಕನಕ ಜಯಂತಿ ಪ್ರಯುಕ್ತ ನಡೆದ ವಿಶೇಷ ಪೂಜೆಯ ನಂತರ “ತೆಂಗಿನಕಾಯಿ ಪವಾಡ” ನಡೆಯಿತು.

ಸಮಾಜದಲ್ಲಿ ಹಾಲಿನಲ್ಲಿ ನೀರು ಬೆರೆಯುವಂತೆ ಬಾಳ್ವೆ ನಡೆಸುವರೆಂದು ಕುರುಬ ಜನಾಂಗದವರನ್ನು ಹಾಲು ಮತಸ್ಥರೆಂದು ಕರೆಯುತ್ತಾರೆ. ಅವರ ಕುಲದೈವ ಬೀರೇದೇವರು. ಈಶ್ವರ ಬೀರೇಶ್ವರನಾಗಿ ಭೂಲೋಕಕ್ಕೆ ಬಂದನೆಂದು ಇವರು ನಂಬುತ್ತಾರೆ. ಅವರು ತಮ್ಮ ಕುಲದೇವರನ್ನು ಪೂಜಿಸುವ ಆಚರಣೆಯನ್ನು ಕುರುಬರ ದ್ಯಾವರ ಎನ್ನುತ್ತಾರೆ. ತಮ್ಮ ಮೂಲ ದೇವಸ್ಥಾನದ ಬಳಿ ಸೇರಿ ಆಚರಿಸುವ ಹಬ್ಬವಿದು. ಭೀರೇಶ್ವರ, ಭತ್ಯೇಶ್ವರ, ಸಿದ್ದೇಶ್ವರ, ಅಬ್ಬಿಣಿ ಬೀರೇಶ್ವರ, ಇಟ್ಟೇಶ್ವರ, ಕಾಶಿ ಬೀರೇಶ್ವರ, ಅಜ್ಜ ಬೀರೇಶ್ವರ, ಗುರು ಮೂರ್ತೇಶ್ವರ, ಮೈಲಾರ ಲಿಂಗೇಶ್ವರ ಹೀಗೆ ವಿವಿಧ ಹೆಸರಿನ ಮನೆದೇವರನ್ನು ಅವರಲ್ಲಿ ಹಲವರು ಹೊಂದಿದ್ದಾರೆ.

ದ್ಯಾವರದಲ್ಲಿ ತಮಟೆ ಎತ್ತನ್ನು ಕಳಸ ಹಾಗೂ ಭಂಡಾರದ ಪೆಟ್ಟಿಗೆಯೊಂದಿಗೆ ತೆಗೆದುಕೊಂಡು ಹೋಗಿ ಗುರು ಅಥವಾ ಜಂಗಮರಿಂದ ಪೂಜೆ ಮಾಡಲಾಗುತ್ತದೆ. ಗುರುವು, ತಮಟೆ ಎತ್ತಿನ ಪಾದ ಮತ್ತು ಹಣೆ ತೊಳೆದು ಪೂಜಿಸಿ ಬೀರಪ್ಪನನ್ನು ಹೊಗಳುತ್ತಾ ವೀರಮಕ್ಕಳು, ವೀರಗಾರ್ರು ಅಥವಾ ಈರಗಾರ್ರ ತಲೆ ಮೇಲೆ ತೆಂಗಿನಕಾಯಿಗಳನ್ನು ಒಡೆಯುತ್ತಾರೆ. ಇವನ ವೇಷ ಶಿವಗಣದ ವೇಷದಂತಿರುತ್ತದೆ. ಇವನು ಮುಖ್ಯಸ್ಥ. ಮುಹೂರ್ತ ನಿರ್ಣಯವಾದ ದಿನದಿಂದ ನಿಯಮಬದ್ಧನಾಗಿ ಬ್ರಹ್ಮಚರ್ಯ ಪಾಲಿಸಬೇಕು. ಇವನು ಆಚಾರ ತಪ್ಪಿದರೆ ಕಾಯಿ ನಡೆಸಿಕೊಳ್ಳುವವರ ತಲೆಗೆ ಗಾಯವಾಗುತ್ತದೆ, ಅವರಿಗೆ ಅಪಾಯ ಎಂದು ಭಾವಿಸಲಾಗುತ್ತದೆ. ಮೊದಲ ಕಾಯಿ ನಡೆಯುವುದು “ದೇವರೆತ್ತಿ”ಗೆ.

ಎಲ್ಲಾ ತೆಂಗಿನಕಾಯಿಗಳೂ “ತಲೆ ಮೇಲೆ ಕಾಯಿ ನಡೆಸಲು” ಯೋಗ್ಯವಲ್ಲ. ಅದು ಚೆನ್ನಾಗಿ ಬಲಿತಿರಬೇಕು. ಅದರ ಮೇಲೆ ಜುಂಜು(ನಾರು) ಇರಬಾರದು. ಜುಟ್ಟೊಂದನ್ನುಳಿಸಿ ಕಾಯಿಯನ್ನು ಕಲ್ಲು – ಬಂಡೆ ಮೇಲೆ ಉಜ್ಜಿ ಉಜ್ಜಿ ಹಸನುಗೊಳಿಸುತ್ತಾರೆ. ಕಾಯಿ ನಡೆಸುವವರನ್ನು “ಕಾಲಾಟದವರು” ಎಂದು ಕೆಲವು ಕಡೆ ಕರೆಯುತ್ತಾರೆ.

ಈರಗಾರ್ರು ಆವೇಶ ಬಂದಂತೆ “ಭಲರೇ, ಭಾಲ್ವರೇ ವೀರ, ವೀರಾಧಿವೀರ, ವಿಸ್ಮಯಕಾರ, ದಶಾವತಾರ, ಭಗಿನಿಕುಮಾರ, ರಾರಾ ನಾ ಮುದ್ದುಲ ವೀರಭದ್ರ, ಭಲರೇ ಬಾಲ್ವರೇ ವೀರ” ಎಂದು ಲಯಬದ್ಧವಾಗಿ ನುಡಿಯುತ್ತಾರೆ. ಹುಡುಗರಿಂದ ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಹೊಡೆಸಿಕೊಳ್ಳಲು ಕೊರಳಿಗೆ ಹೂಮಾಲೆ ಹಾಕಿಕೊಂಡು ಗುರುಗಳಿಂದ ಆಶೀರ್ವಾದ ಪಡೆದುಕೊಂಡು ದಂಡಕಗಳನ್ನು ಹೇಳಿಸಿಕೊಂಡು ಸಿದ್ಧರಾಗಿರುತ್ತಾರೆ. ಹೀಗೆ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವುದನ್ನು ತೆಂಗಿನಕಾಯಿ ಪವಾಡ ಎನ್ನುತ್ತಾರೆ. ಈ ಕಾಯಿ ಪವಾಡ ನೋಡಲು ಅಸಂಖ್ಯ ಮಂದಿ ಭಕ್ತಾದಿಗಳು ಕುತೂಹಲಿಗಳಾಗಿ ಸೇರಿರುತ್ತಾರೆ.

“ಈ ಪವಾಡದಲ್ಲಿ ಭಾಗವಹಿಸುವ ವೀರಮಕ್ಕಳು ಉಪವಾಸ ವ್ರತವನ್ನು ಕೈಗೊಂಡಿರುತ್ತಾರೆ. ಹೀಗೆ ಕಟ್ಟುನಿಟ್ಟಾಗಿ ಬಹಳ ಭಯ ಭಕ್ತಿಯಿಂದ ಇದ್ದಾಗ ಮಾತ್ರ ತಲೆ ಮೇಲೆ ಎಷ್ಟು ಕಾಯಿ ಒಡೆದರೂ ತಲೆಗೆ ಗಾಯವಾಗುವುದಿಲ್ಲ. ಒಂದು ವೇಳೆ ಕಾಯಿ ಕರಟ ತಗುಲಿ ರಕ್ತ ಬಂದಿದ್ದರೂ ಭಂಡಾರ ಹಚ್ಚುವುದರಿಂದ ದೇವರ ಶಕ್ತಿಯಿಂದ ಗಾಯ ವಾಸಿಯಾಗುತ್ತದೆ. ಅದಕ್ಕಾಗಿ ಯಾವುದೇ ರೀತಿಯ ಔಷಧಿ ಪಡೆಯಬೇಕಾದ ಅಗತ್ಯವಿಲ್ಲ. ಕೆಲವರು ನಿರಂತರವಾಗಿ ಕಾಯಿಗಳನ್ನು ಒಡೆಸಿಕೊಳ್ಳುತ್ತಾರೆ” ಎನ್ನುತ್ತಾರೆ ಕಾಯಿ ಒಡೆಯುವ ಗುಡಿಬಂಡೆ ತಾಲ್ಲೂಕಿನ ಜಂಬಿಗೆಮರದಹಳ್ಳಿ ಭಾವಣ್ಣ.

For Daily Updates WhatsApp ‘HI’ to 7406303366

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!