Gauribidanur: ಗೌರಿಬಿದನೂರು ನಗರದಲ್ಲಿ ಭಾನುವಾರ ಹಾಲು ಉತ್ಪಾದಕರ ಬೇಡಿಕೆಗಳ ಕುಂದುಕೊರತೆಗೆ ಸಂಬಂಧಿಸಿದಂತೆ ನೊಂದ ಹಾಲು ಉತ್ಪಾದಕರ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಮಾಳಪ್ಪ ” ಇತೀಚೆಗೆ ಕೋಚಿಮುಲ್ ವಿಭಜನೆಗೊಂಡಿರುವುದು ಸಂತಸ ತಂದಿದೆ ಆದರೆ ರೈತರಿಗೆ ಹಾಲಿನ ದರದಲ್ಲಿ ₹29 ರಿಂದ ₹24ಕ್ಕೆ ಇಳಿಸಿರುವುದು ರೈತರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಈ ಕುರಿತು ತಾಲ್ಲೂಕಿನ ಎಲ್ಲ ಹೈನುದಾರರು ಹಾಗೂ ಹಾಲು ಉತ್ಪಾದಕರ ಸಂಘದ ನಿರ್ದೇಶಕರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ರೈತರಿಗೆ ಮತ್ತು ಹಾಲು ಉತ್ಪಾದಕರಿಗೆ ಅನ್ಯಾಯ ಮಾಡಲು ಹೊರಟಿರುವ ಹಾಲು ಒಕ್ಕೂಟದ ವಿರುದ್ಧ ಪ್ರತಿಭಟನೆ ಮಾಡಲು ಸಿದ್ಧರಾಗುತ್ತೇವೆ ” ಎಂದು ಹೇಳಿದರು.
ಒಕ್ಕೂಟವು ರೈತರ ಹಾಲಿಗೆ ₹ 24 ಪ್ರತಿ ಲೀಟರಿಗೆ ನಿಗದಿಮಾಡಿ ಗ್ರಾಹಕರಿಗೆ ಸುಮಾರು ₹ 35ಕ್ಕೆ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆದು ರೈತರಿಗೆ ಅನ್ಯಾಯ ಮಾಡುತ್ತಿದ್ದೆ. ನವೆಂಬರ್ 17ರಂದು ನಗರದ ನದಿದಡ ಆಂಜನೇಯಸ್ವಾಮಿ ದೇವಾಲಯದ ಬಳಿ ಹೈನುದಾರರು ಮತ್ತು ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಜೊತೆ ಚರ್ಚಿಸಿ ಪ್ರತಿಭಟನೆ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ವಿ.ಲೋಕೇಶ್ ಗೌಡ ಹೇಳಿದರು.
ಸಭೆಯಲ್ಲಿ ವಕೀಲ ಸಣ್ಣಕ್ಕಿ ವೆಂಕಟರವಣಪ್ಪ, ರೈತ ಮುಖಂಡ ಸನತ್ ಕುಮಾರ್, ಪ್ರಭಾಕರ್, ಜಿ.ಎಲ್.ಅಶ್ವತ್ಥನಾರಾಯಣ, ದಿಲೀಪ್, ಲೋಕೇಶ್, ಗಂಗಾಧರಪ್ಪ, ಕಲಾವತಿ ಪಾಲ್ಗೊಂಡಿದ್ದರು.