Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ (Deputy Commissioner) ಪಿ.ಎನ್.ರವೀಂದ್ರ ರೈತರೊಂದಿಗೆ ಸಭೆ (Farmers Meeting) ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ “ಇಲ್ಲಿಯವರೆಗೆ ರೈತರು ಪಡೆದಿರುವ ಸಾಲ ಮರು ಪಾವತಿಸುವಂತೆ ಯಾವುದೇ ಬ್ಯಾಂಕ್, ಮೈಕ್ರೊ ಫೈನಾನ್ಸ್‌ಗಳು, ಲೇವಾದೇವಿಗಾರರು ನೋಟಿಸ್ ಕೊಡುವುದಾಗಲಿ ಅಥವಾ ಹಣ ಪಾವತಿಸುವಂತೆ ಒತ್ತಾಯಿಸುವಂತಿಲ್ಲ. ಈ ಕುರಿತು ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ. ನರೇಗಾ ಮತ್ತಿತರ ಯೋಜನೆಗಳಡಿ ರೈತರ ಖಾತೆಗೆ ಸರ್ಕಾರದಿಂದ ಡಿಬಿಟಿ ಆಗುವ ಹಣವನ್ನು ಬೆಳೆಸಾಲಕ್ಕೆ ಕಟಾಯಿಸಬಾರದು. ಒಂದು ವೇಳೆ ಬ್ಯಾಂಕಿನವರು ಕಟಾಯಿಸಿದರೆ ಕೂಡಲೇ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಿಗೆ ಮನವಿ ನೀಡಿದರೆ ಅಂತಹ ಹಣವನ್ನು ರೈತರ ಖಾತೆಗೆ ಹಿಂದಿರುಗಿಸಲಾಗುತ್ತದೆ. ಬರ ಪರಿಹಾರ, ಬೆಳೆ ವಿಮೆ ಹಣ, ನರೇಗಾ ಹಣ ರೈತರ ಖಾತೆಗೆ ಜಮೆ ಮಾಡಲು ಪ್ರೋಟ್ಸ್ ಐಡಿ ಗುರುತಿನ ಚೀಟಿಯನ್ನು ರೈತರು ಮಾಡಿಸಿಕೊಳ್ಳಬೇಕು. ಬರ ಕಾರಣ ವಿವಿಧ ಕಡೆಗಳಲ್ಲಿ ಗೋಶಾಲೆಗಳನ್ನು ತೆರೆಯಲು ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿರುವ ಸೈಬರ್ ಸೆಂಟರ್‌ಗಳು, ಗ್ರಾಮ ಒನ್ ಸೆಂಟರ್‌ಗಳು ನೀಡುವ ವಿವಿಧ ಸೇವೆಗಳಿಗೆ ಶುಲ್ಕಗಳ ದರ ಪಟ್ಟಿಯನ್ನು ತಮ್ಮ ಕೇಂದ್ರದ ಮುಂಭಾಗ ಪ್ರಕಟಿಸಬೇಕು. ಸೇವೆಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿದ್ದು ಕೂಡಲೇ ಅಧಿಕಾರಿಗಳು ಕ್ರಮ ವಹಿಸಬೇಕು” ಎಂದು ಹೇಳಿದರು.
ರೈತ ಮುಖಂಡ ಶಶಿಕುಮಾರ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಾಸಿಮ್ ಖಾನಂ, ಪಶು ಇಲಾಖೆಯ ಉಪ ನಿರ್ದೇಶಕ ಡಾ. ರವಿ, ತಹಶೀಲ್ದಾರ್ ಮಹೇಶ್ ಪತ್ರಿ, ಮನೀಷ್, ಸುದರ್ಶನ್, ರೈತ ಮುಖಂಡರಾದ ರಘುನಾಥ ರೆಡ್ಡಿ, ಎಚ್.ಎನ್. ಕದಿರೇಗೌಡ, ಲೋಕೇಶ್ ಗೌಡ, ರಾಜಣ್ಣ, ಶಿವಶಂಕರ್ ರೆಡ್ಡಿ, ವರದರಾಜು, ಶಿ ಮುನೇಗೌಡ, ನವೀನ್ ಕುಮಾರ್, ಶಿವರಾಜ್, ಸಂಪತ್ ಕುಮಾರ್, ಭೈರಾರೆಡ್ಡಿ, ಎಂ.ಮುನಿಯಪ್ಪ, ವೆಂಕಟೇಶಪ್ಪ, ವೆಂಕಟರಾಯಪ್ಪ, ನಾರಾಯಣಸ್ವಾಮಿ, ವೆಂಕಟರಾಮಯ್ಯ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.