Devaramallur, Sidlaghatta : ಸಮಾನತೆ, ಭ್ರಾತೃತ್ವ, ರಾಷ್ಟ್ರೀಯ ಏಕತೆ ಮೂಡಿಸುವಲ್ಲಿ ದೇಶದ ಸಂವಿಧಾನ ಪ್ರಧಾನ ಪಾತ್ರ ವಹಿಸಿದೆ ಎಂದು ಸಿಆರ್‌ಪಿ ಪ್ರಭಾಕರ್ ಹೇಳಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಬರ ಮಾಡಿಕೊಂಡು ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ಪ್ರಜಾಪ್ರಭುತ್ವ ಗಣತಂತ್ರ ದೇಶವಾಗಿದ್ದು, ವಿವಿಧತೆಯಲ್ಲಿ ಏಕತೆ ಹೊಂದಿದೆ. ಇಂತಹ ಬೃಹತ್ ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಅದರ ಅಡಿಯಲ್ಲಿ ತರ್ಕಬದ್ಧ ಚಿಂತನೆಗಳ ಮೂಲಕ ನಮಗೆ ಹಕ್ಕು ಹಾಗು ಕರ್ತವ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಸಂವಿಧಾನ ಪ್ರಜಾಪ್ರಭುತ್ವದ ಪ್ರೇರಕ ಶಕ್ತಿಯಾಗಿ ನೆಲೆನಿಂತಿದೆ. ಸಂವಿಧಾನ ಒಂದು ವರ್ಗಕ್ಕೆ ಸೀಮಿತವಲ್ಲ. ಸರ್ವ ಜನಾಂಗದ ಏಳಿಗೆಗಾಗಿ ರಚಿತವಾದ ಕಾನೂನೇ ಸಂವಿಧಾನ ಎಂದು ಪ್ರತಿಪಾದಿಸಿದರು.
ಡಾ.ಬಿ.ಆರ್.ಅಂಬೇಡ್ಕರ್‌ರವರ ಮೂಲ ಉದ್ದೇಶ ದೇಶದ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆಯಬೇಕು ಎನ್ನುವುದಾಗಿತ್ತು. ಅವರ ದೂರದೃಷ್ಟಿಯ ಪರಿಣಾಮ ಇಂದು ದೇಶದ ಪ್ರತಿಯೊಂದು ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಂಥಾಲಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ತಾಲ್ಲೂಕಿನಲ್ಲಿಯೂ ವಸತಿ ಶಾಲೆಗಳು ನಡೆಯುತ್ತಿದ್ದು ಲಕ್ಷಾಂತರ ಮಂದಿ ಹಿಂದುಳಿದ ಬಡ ಮಕ್ಕಳು ಸಹ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋದಿಸಲಾಯಿತು. ಜಾಗೃತಿ ಜಾಥಾ ಮೆರವಣಿಗೆಯಲ್ಲಿ ದೇವರಮಳ್ಳೂರು ಗ್ರಾ.ಪಂ ಸದಸ್ಯರೂ, ಗ್ರಾಮಸ್ಥರು, ವಿವಿಧ ಶಾಲೆಗಳ ಶಿಕ್ಷಕ, ಶಿಕ್ಷಕಿಯರು, ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಶಿಲಮ್ಮ, ಉಪಾಧ್ಯಕ್ಷೆ ಸನಸೂಯಮ್ಮ, ಸದಸ್ಯರಾದ ಕೆಂಪೇಗೌಡ, ವೆಂಕಟೇಶ್, ಪವಿತ್ರ, ಶಿವಣ್ಣ, ಜಗದೀಶ್, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಶಶಿಕುಮಾರ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಸಿ.ವಿ.ಲಕ್ಷ್ಮಣರಾಜು, ಪಿಡಿಓ ಬಿ.ಎನ್.ಗೋಪಾಲ್, ಶಿಕ್ಷಕ ಮಂಜುನಾಥ್, ಗ್ರಾ.ಪಂ ವ್ಯಾಪ್ತಿಯ ವಿವಿಧ ಶಾಲಾ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.