Home Sidlaghatta ಸಾರ್ವಜನಿಕರಿಂದ ದೂರು; ದಿಬ್ಬೂರಹಳ್ಳಿ ಪೋಲಿಸ್ ಠಾಣೆಗೆ ಜಿಲ್ಲಾ ನ್ಯಾಯಾಧೀಶರ ದಿಡೀರ್ ಭೇಟಿ

ಸಾರ್ವಜನಿಕರಿಂದ ದೂರು; ದಿಬ್ಬೂರಹಳ್ಳಿ ಪೋಲಿಸ್ ಠಾಣೆಗೆ ಜಿಲ್ಲಾ ನ್ಯಾಯಾಧೀಶರ ದಿಡೀರ್ ಭೇಟಿ

0

Sidlaghatta : ಸಾರ್ವಜನಿಕರಿಂದ ಬಂದ ವ್ಯಾಪಕ ದೂರುಗಳ ಬಗ್ಗೆ ಪರಿಶೀಲನೆ ಮಾಡಲು ಖುದ್ದು ಜಿಲ್ಲಾ ನ್ಯಾಯಾಧೀಶರೇ (District Judge) ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ (Dibburahalli Police Station) ಭೇಟಿ ನೀಡಿ ಶನಿವಾರ ಪರಿಶೀಲನೆ ನಡೆಸಿದರು.

ಶನಿವಾರ ಬೆಳಗ್ಗೆ ಜಿಲ್ಲಾ ಕಾನೂನು ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಲಕ್ಷ್ಮಿಕಾಂತ್ ಮಸ್ಕಿನ್ ಹಾಗೂ ಶಿಡ್ಲಘಟ್ಟದ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆ ಹನುಮಂತಪ್ಪ ಅವರೊಂದಿಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಕಡತಗಳನ್ನು ಪರಿಶೀಲಿಸಿದರು.

ಟ್ರಾಕ್ಟರ್ ವಶಪಡಿಸಿಕೊಂಡು ಆರು ತಿಂಗಳಾದರು ಏಕೆ FIR ಹಾಕಿಲ್ಲ, PF ಹಾಕಿಲ್ಲ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾದ ಪಿಎಸ್‌ಐ ಪಾಪಣ್ಣ ರವರು ತಾವು ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಗಮನಕ್ಕೆ ತಂದಿರುವುದಾಗಿ ತಿಳಿಸಿದರು. ಅವರ ಸೂಚನೆಯಂತೆ 2 ಲಕ್ಷ 45 ಸಾವಿರ ಜುಲ್ಮಾನೆ ಕಟ್ಟಿ ವಾಹನ ತೆಗೆದುಕೊಂಡು ಹೋಗಲು ತಾವೆ ಜಯರಾಮಪ್ಪ ರವರಿಗೆ ಮೌಕಿಕವಾಗಿ ತಿಳಿಸಿದ್ದರೂ ಅವರು ಬರಲೇ ಇಲ್ಲವೆಂದು ಹೇಳಿದರು. ಲಿಖಿತವಾಗಿ ಏಕೆ ನೋಟಿಸ್ ನೀಡಿಲ್ಲವೆಂದ ಪ್ರಶ್ನೆಗೆ ಪಾಪಣ್ಣರವರು ನಿರುತ್ತರರಾದರು.

ನ್ಯಾಯಾಧೀಶರು ಸ್ಥಳದಲ್ಲಿ ಇರುವ ವಶಪಡಿಸಿಕೊಂಡ ಎಲ್ಲಾ ವಾಹನಗಳ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸುಮಾರು 20 ಕ್ಕೂ ಅಧಿಕ ಮಂದಿ ಸಾರ್ವಜನಿಕರು ದೂರುಗಳ ಸುರಿಮಳೆಯನ್ನೇ ಸುರಿಸಿದರು. ವಕೀಲರಾದ ಶ್ರೀನಾಥ್ ರವರು ತಮ್ಮ ಕಕ್ಷಿದಾರ ಜಯರಾಮಪ್ಪ ರವರಿಗೆ ಹಾಗೂ ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ನೀಡುತ್ತಿರುವ ಕಿರುಕುಳದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

“ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕಾನೂನು ಬಾಹಿರವಾಗಿ ರೈತರ ಟ್ರಾಕ್ಟರ್‌ಗಳನ್ನು ವಶಪಡಿಸಿಕೊಂಡು ಕಳೆದ ಆರು ತಿಂಗಳಗಳಿಂದ ಠಾಣೆಯ ಸಬ್ ಇನ್ಸ್ ಪೆಕ್ಟರ್ ಟಿ.ಎನ್‌.ಪಾಪಣ್ಣ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ, ಈ ಬಗ್ಗೆ ತಾವು ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ದೂರು ಸಲ್ಲಿಸಿರುವುದಾಗಿ” ಜಯರಾಮಪ್ಪ ಈ ಸಂದರ್ಭದಲ್ಲಿ ತಿಳಿಸಿದರು.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ತಾವು ತಮ್ಮ ಟ್ರಾಕ್ಟರ್‌ನಲ್ಲಿ ಸುಮಾರು 14 ಪಾಯ ಕಲ್ಲುಗಳನ್ನು ಸಾಗಿಸುತ್ತಿದ್ದಾಗ ಸಬ್ ಇನ್ಸ್ ಪೆಕ್ಟರ್ ಪಾಪಣ್ಣ ಟ್ರಾಕ್ಟರ್ ವಶಪಡಿಸಿಕೊಂಡರು. ಯಾವುದೇ ಮೊಕದ್ದಮೆ ಹೂಡದೆ ಟ್ರಾಕ್ಟರ್ ಬಿಡುಗಡೆ ಮಾಡಲು ಎರಡು ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದರು. ಇದೇ ರೀತಿ ಬಹಳಷ್ಟು ರೈತರ ವಾಹನಗಳನ್ನು ವಶಪಡಿಸಿಕೊಂಡು ಲಂಚದ ಬೇಡಿಕೆ ಇಟ್ಟಿದ್ದಾರೆ. ಕಳೆದ ವಾರದಿಂದ ಬಹಳಷ್ಟು ಮರಳು ಟ್ರಾಕ್ಟರ್‌ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ಹೂಡದೆ ಲಂಚ ಪಡೆದು ಬಿಡುಗಡೆ ಮಾಡಿದ್ದಾರೆ ಎಂದು ಜಯರಾಮಪ್ಪ ಆರೋಪಿಸಿದರು.

ಠಾಣೆಯಲ್ಲಿ ದಳ್ಳಾಳಿಗಳ ವ್ಯವಹಾರ ವ್ಯಾಪಕವಾಗಿ ಇದ್ದು ಠಾಣೆಯಲ್ಲಿ ಪ್ರತಿದಿನವೂ ದಳ್ಳಾಳಿಗಳದೇ ದರ್ಬಾರ್ ನಡೆಯುತ್ತಿದೆ. ಲಂಚದ ಹಣವನ್ನು ಇವರ ಮೂಲಕವೇ ಸಂದಾಯ ಮಾಡಿದಲ್ಲಿ ಮಾತ್ರ ಯಾವುದೇ ತೊಂದರೆ ಇಲ್ಲದೆ ವಾಹನಗಳ ಬಿಡುಗಡೆ ಮಾಡುತ್ತಿರುತ್ತಾರೆ. ಠಾಣೆಯಲ್ಲಿನ ಸಿ.ಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದರೆ ದಳ್ಳಾಳಿ ಹಾವಳಿ ಬಗ್ಗೆ ಸತ್ಯಾಂಶವನ್ನು ತಿಳಿಯಬಹುದೆಂದು ದೂರುದಾರ ಜಯರಾಮಪ್ಪ ಹೇಳಿದರು.

ಈ ಬಗ್ಗೆ ಜಿಲ್ಲಾ ಕಾನೂನು ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ವಕೀಲರಾದ ಶ್ರೀನಾಥ್ ಮತ್ತು ಮಂಜುನಾಥ್ ಮುಖಾಂತರ ದೂರನ್ನು ದಾಖಲೆ ಮಾಡಿದ್ದಾಗಿ ತಿಳಿಸಿದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

error: Content is protected !!
Exit mobile version