Gauribidanur : ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ (Dr K Sudhakar) ಹಾಗೂ ಜಿಲ್ಲಾಧಿಕಾರಿ ಆರ್.ಲತಾ (District Commissioner Smt. R Latha) ಸೇರಿದಂತೆ ಇನ್ನಿತರ ಅಧಿಕಾರಿಗಳು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿ ಪುರ ಗ್ರಾಮದಲ್ಲಿ ನವೆಂಬರ್ 6ರಂದು ವಾಸ್ತವ್ಯ ಹೂಡಲಿದ್ದಾರೆ.
ಶನಿವಾರ ಬೆಳಿಗ್ಗೆ 10ಗಂಟೆಯಿಂದಲೇ ಪುರ ಗ್ರಾಮದಲ್ಲಿ ಈಚೆಗೆ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಆರ್.ಲತಾ, ಜಿ.ಪಂ ಸಿಇಒ ಪಿ.ಶಿವಶಂಕರ್, ತಹಶೀಲ್ದಾರ್ ಎಚ್.ಶ್ರೀನಿವಾಸ್ ಸೇರಿದಂತೆ ಇತರ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ವೀಕ್ಷಣೆ ಮಾಡಲಿದ್ದು, ನಂತರ ಆರ್ಕುಂದ ಗ್ರಾಮಸ್ಥರ ಮನವಿ ಮೇರೆಗೆ ದಶಕಗಳ ಬಳಿಕ ನಿರ್ಮಾಣವಾಗಿರುವ ನೂತನ ರಸ್ತೆಯ ಮೂಲಕ ಪುರ ಗ್ರಾಮದಿಂದ ಆರ್ಕುಂದ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಒತ್ತುವರಿಯಾಗಿದ್ದ ರಸ್ತೆ ತೆರವು ಪರಿಶೀಲಿಸಲಿದ್ದಾರೆ.
ಪುರ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಮಧ್ಯಾಹ್ನ 3ಗಂಟೆಗೆ ಆಯೋಜನೆ ಮಾಡಿದ್ದು, ಸ್ಥಳೀಯರು ತಮ್ಮ ಅಹವಾಲು ಜಿಲ್ಲಾಧಿಕಾರಿಗಳಿಗೆ ನೀಡಬಹುದಾಗಿದೆ ಬಳಿಕ ಸಂಜೆ ಪುರ ಗ್ರಾಮದಲ್ಲಿ ಸಚಿವರು ಮತ್ತು ಜಿಲ್ಲಾಧಿಕಾರಿ ವಾಸ್ತವ್ಯ ಹೂಡಲಿದ್ದಾರೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.