Sidlaghatta: ಶಿಡ್ಲಘಟ್ಟ ನಗರದ ಕೋಟೆ ವೃತ್ತವನ್ನು ದಿವಂಗತ ಪುನೀತ್ ರಾಜ್‌ಕುಮಾರ್ ವೃತ್ತ ಎಂದು ನಾಮಕರಣ ಮಾಡುವುದರ ಜೊತೆಗೆ ಅವರ ಪುತ್ಥಳಿ ಪ್ರತಿಷ್ಠಾಪನೆ ಮಾಡುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸದಸ್ಯರು ಗುರುವಾರ ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ರಿಗೆ ಮನವಿ ಸಲ್ಲಿಸಿದರು.
ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಹಿರಿಯನಾಗರಿಕರಿಗೆ ವೃದ್ಧಾಶ್ರಮಗಳನ್ನು ಸ್ಥಾಪಿಸುವ ಮೂಲಕ ಸಮಾಜದ ಎಲ್ಲಾ ವರ್ಗದವರಿಗೂ ತಮ್ಮ ಕೈಲಾದ ಸಹಾಯ ಹಸ್ತ ಚಾಚುವ ಮೂಲಕ ಪುನೀತ್ ರಾಜ್‌ಕುಮಾರ್ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಹೆಸರನ್ನು ಕೋಟೆ ವೃತ್ತಕ್ಕೆ ಇಡಬೇಕು ಎಂದು ತಾಲ್ಲೂಕು ಅಧ್ಯಕ್ಷ ಜಿ.ವಿ.ಮಂಜುನಾಥ ಹೇಳಿದರು.
ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಚಿತ್ರ ನಟರಾಗಿ ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗದ ಜನರಿಗೆ ಸಹಾಯ ಮಾಡುವ ತಮ್ಮ ಗುಣದಿಂದ ಎಲ್ಲರ ಮನಗೆದ್ದಿದ್ದರು. ಅಂತಹ ಮಹಾನ್ ವ್ಯಕ್ತಿಯ ಸ್ಮರಣಾರ್ಥ ನಗರದ ಕೋಟೆ ವೃತ್ತದಲ್ಲಿ ಅವರ ಪುತ್ಥಳಿ ನಿರ್ಮಿಸಬೇಕು. ಕೋಟೆ ವೃತ್ತಕ್ಕೆ ಪುನೀತ್ ರಾಜ್‌ಕುಮಾರ್ ವೃತ್ತ ಎಂದು ಮರುನಾಮಕರಣ ಮಾಡಲು ನಗರಸಬೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಶೀಘ್ರವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ತಾಲ್ಲೂಕು ಉಪಾಧ್ಯಕ್ಷ ಅಂಬರೀಶ್, ನಗರ ಘಟಕದ ಅಧ್ಯಕ್ಷ ಜೆ.ಮಧುಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಪ್ರಭಾಕರ್, ನಗರ ಘಟಕದ ಗೌರವಾಧ್ಯಕ್ಷ ಮುನಿಕೃಷ್ಣ, ಕಾರ್ಯದರ್ಶಿ ಮೂರ್ತಿ ಹಾಜರಿದ್ದರು.