Chikkaballapur : ರಾಷ್ಟ್ರೀಯ ಹಸಿರು ಪಡೆ ಯೋಜನೆ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಅನುಷ್ಠಾನಗೊಂಡಿದ್ದು ಪ್ರತಿ ಶಾಲೆಗೆ ₹ 5,000ದಂತೆ 300 ಶಾಲೆಗಳಿಗೆ ಅನುದಾನ ಬಿಡುಗಡೆ ಆಗಿತ್ತು, ಇದರಲ್ಲಿ ಇಕೊ ಕ್ಲಬ್ (Eco Club) ಚಟುವಟಿಕೆಗಳ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ (Deputy Commissioner) ಕಚೇರಿಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ (R Latha) ಗುರುವಾರ ಬಹುಮಾನ ವಿತರಿಸಿದರು.
ಶಾಲಾ ಮಕ್ಕಳಲ್ಲಿ ಪರಿಸರ ವ್ಯವಸ್ಥೆ ಮತ್ತು ಅದರ ಸಂರಕ್ಷಣೆಯ ಕುರಿತು ಸಂವೇದನೆ ಉಂಟು ಮಾಡಲು ಸರ್ಕಾರವು ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ ಮತ್ತು ಅನುಷ್ಠಾನ ಯೋಜನೆ ರೂಪಿಸಿದೆ. ಇಕೊ ಕ್ಲಬ್ ಚಟುವಟಿಕೆಗಳನ್ನು ಶಾಲಾ ಮಕ್ಕಳಿಂದ ಪ್ರಾಯೋಗಿಕ ನಿರ್ವಹಿಸಿದ್ದು ಉತ್ತಮ. ಮುಂದಿನ ಶೈಕ್ಷಣಿಕ ವರ್ಷದಲ್ಲೂ ಇಕೊ ಕ್ಲಬ್ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಆರ್.ಲತಾ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ.ಜಯರಾಮ ರೆಡ್ಡಿ, ಇಕೊ ಕ್ಲಬ್‌ನ ಶ್ರೀನಿವಾಸ್, ಅರಣ್ಯ ಇಲಾಖೆಯ ಮುಖೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.
ಶಾಲೆಗಳ ವಿವರ
ಬಾಗೇಪಲ್ಲಿ ತಾಲ್ಲೂಕಿನ ಘಂಟಂವಾರಿಪಲ್ಲಿಯ ಪ್ರೌಢಶಾಲೆ, ಮಲ್ಲಸಂದ್ರದ ಹಿರಿಯ ಪ್ರಾಥಮಿಕ ಶಾಲೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂಗರೇಖನಹಳ್ಳಿಯ ಪ್ರೌಢಶಾಲೆ, ಇನಮಿಂಚೇನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆ.
ಚಿಂತಾಮಣಿ ತಾಲ್ಲೂಕಿನ ಯಗವಕೋಟೆಯ ಪ್ರೌಢಶಾಲೆ, ಕೆಂದನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ.
ಗೌರಿಬಿದನೂರು ತಾಲ್ಲೂಕಿನ ಅಲಿಪುರ ಪ್ರೌಢಶಾಲೆ, ಮಂಚೇನಹಳ್ಳಿ ಉರ್ದು ಹಿರಿಯ ಪ್ರಾಥಮಿಕ ಶಾಲೆ.
ಗುಡಿಬಂಡೆ ತಾಲ್ಲೂಕಿನ ಯಲ್ಲೋಡು ಪ್ರೌಢಶಾಲೆ, ಬೀಚಗಾನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ.
ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಪ್ರೌಢಶಾಲೆ, ಸುಗಟೂರು ಹಿರಿಯ ಪ್ರಾಥಮಿಕ ಶಾಲೆ.