Chikkaballapur : ನವದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತ ಸಂಘಟನೆಗಳು, ಎಡಪಕ್ಷಗಳ ಬೆಂಬಲಿತ ಸಂಘಟನೆಗಳು ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದ ಹೊರವಲಯದ ಚದುಲಪುರ ಕ್ರಾಸ್‌ನಲ್ಲಿ ಶುಕ್ರವಾರ ಬೆಳಿಗ್ಗೆ 11ರ ವೇಳೆಗೆ ಸಮಾವೇಶಗೊಂಡು ಹಳೇ ಜಿಲ್ಲಾಧಿಕಾರಿ ಕಚೇರಿ ಎದುರಿನ ಹೆದ್ದಾರಿಯವರೆಗೂ ಮೆರವಣಿಗೆ ನಡೆಸಿ, ರಾಷ್ಟ್ರೀಯ ಹೆದ್ದಾರಿ 7 ತಡೆ ಮಾಡಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ” ರೈತರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸೋತಿದೆ. ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ 25 ಸಾವಿರ ಟ್ರಾಕ್ಟರ್‌ನೊಂದಿಗೆ ಬಂದ ರೈತರನ್ನು ಪ್ರತಿಭಟನ ಸ್ಥಳದಿಂದ ಕದಲಿಸಲು ಸರ್ಕಾರ ಪೊಲೀಸರ ಮೂಲಕ ಬಲ ಪ್ರಯೋಗ ಮಾಡಿಸಿದ್ದರು. ಜಾನುವಾರುಗಳಿಗೆ ತಾಯಿ, ಅಪ್ಪ ಅಮ್ಮ ಎಂದು ಹೇಳಿ ಧರ್ಮದ ಹೆಸರಿನಲ್ಲಿ ಜನರಿಗೆ ಬಿಜೆಪಿಯವರು ಮರಳು ಮಾಡುತ್ತಿದ್ದಾರೆ. ತಕ್ಷಣವೇ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು, ಈ ಹೋರಾಟದಲ್ಲಿ ಮೃತಪಟ್ಟ ಪ್ರತಿ ರೈತರ ಕುಟುಂಬ ಸದಸ್ಯರಿಗೆ ಕೇಂದ್ರ ಸರ್ಕಾರ ₹ 1 ಕೋಟಿ ನೀಡಬೇಕು ” ಎಂದು ಆಗ್ರಹಿಸಿದರು.
ಕಾಟಾಚಾರಕ್ಕೆ ಮುಖ್ಯಮಂತ್ರಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂದು ಹೋಗಿದ್ದಾರೆ. ರೈತರ ಬೆಳೆ ಶೇ 60ರಷ್ಟು ಹಾನಿ ಆಗಿದ್ದು, ರಾಜ್ಯ ಸರ್ಕಾರ ತಕ್ಷಣವೇ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ಮಳೆಯಿಂದ ರೈತರಿಗೆ ತೊಂದರೆಯಾಗಿದ್ದು 50 ಸಾವಿರ ಹೆಕ್ಟೇರ್ ಬೆಳೆ ಹಾನಿ ಆಗಿದೆ. ಮುಖ್ಯಮಂತ್ರಿಗಳು 4 ಗಂಟೆಯಲ್ಲಿ ಪರಿಹಾರ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಒಂದು ಹೆಕ್ಟೇರ್‌ಗೆ 6 ಸಾವಿರ ನೀಡುತ್ತಾರೆ. ಎರಡು ಗಂಟೆ ಉಳುಮೆಗೆ 2 ಸಾವಿರ ಕೊಡಬೇಕು. ಎಕರೆಗೆ 25 ಸಾವಿರ, ತರಕಾರಿ ಬೆಳೆಗೆ ₹ 1 ಲಕ್ಷ ಪರಿಹಾರ ಕೊಡಬೇಕು ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ.ಬೈಯ್ಯಾರೆಡ್ಡಿ ತಿಳಿಸಿದರು.
ರೈತ ಮುಖಂಡರಾದ ಕವಿತಾ ಕುರುಗಂಟಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್, ಸಿಐಟಿಯು ಮುಖಂಡರಾದ ಪ್ರಕಾಶ್, ಅಪ್ಪಣ್ಣ, ಮುನಿಕೃಷ್ಣಪ್ಪ ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯಿಂದ ಹೆದ್ದಾರಿ ತಡೆಗೊಂಡ ಕಾರಣ ವಾಹನ ಸವಾರರು ತೀವ್ರ ಸಂಕಷ್ಟಕ್ಕೊಳಗೊಂಡರು. ನಂದಿಕ್ರಾಸ್‌ನಲ್ಲಿ ಪರ್ಯಾಯ ಮಾರ್ಗ ನೀಡಿದ್ದರಿಂದ ವಾಹನಗಳು ಜಡಲತಿಮ್ಮನಹಳ್ಳಿ ನಂದಿ ಮಾರ್ಗವಾಗಿ ಮತ್ತೆ ರಾಷ್ಟ್ರೀಯ ಹೆದ್ದಾರಿಯನ್ನು ತಲುಪುತ್ತಿದ್ದವು. ಇದರಿಂದ ಚಿಕ್ಕಬಳ್ಳಾಪುರ ನಗರದಲ್ಲಿಯೂ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.