Bagepalli : ಮಂಗಳವಾರ ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಪಂಚಾಯಿತಿಯ ಗಡಿದಂ ಕೆರೆ ಕೋಡಿ ಹರಿದಿದ್ದರಿಂದ, ಕೊಂಡಂವಾರಿಪಲ್ಲಿ ಗ್ರಾಮದ ಕೆರೆಕಟ್ಟೆಯ ಮೇಲಿರುವ ಗಂಗಮ್ಮ ದೇವಿಗೆ ಮಹಿಳೆಯರು ತಂಬಿಟ್ಟಿನ ದೀಪದಾರತಿ ಮೆರವಣಿಗೆ ಮಾಡಿ, ಪೂಜೆ ಸಲ್ಲಿಸಿದರು.
ಒಂದು ತಿಂಗಳಿನಿಂದ ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮದಿಂದ ಕೊಂಡಂವಾರಿಪಲ್ಲಿ ಗ್ರಾಮಕ್ಕೆ ಸಂಪರ್ಕಿಸುವ ಕೆರೆ ಕೋಡಿ ಹರಿದಿದೆ. ಕೊಂಡಂವಾರಿಪಲ್ಲಿ ಗ್ರಾಮದ ಕೆರೆಕಟ್ಟೆಯ ಗಂಗಮ್ಮ ದೇವಿಗೆ ವಿಶೇಷವಾದ ಹೂವಿನ, ವಿದ್ಯುತ್ ದೀಪಾಲಂಕಾರವನ್ನು ಗ್ರಾಮಸ್ಥರು ಮಾಡಿದರು. ಗ್ರಾಮದ ಜನರು ಮನೆಗಳಲ್ಲಿ ತಂಬಿಟ್ಟನ್ನು ಸಿದ್ಧಪಡಿಸಿ, ಹೂವುಗಳಿಂದ ಸಿಂಗರಿಸಿದ ತಂಬಿಟ್ಟಿನ ದೀಪದಾರತಿಯನ್ನು ಮಹಿಳೆಯರು, ಹೆಣ್ಣುಮಕ್ಕಳು ಗಂಗಮ್ಮ ದೇವಿಗೆ ಬೆಳಗಿಸಿದರು. ಸಂಪ್ರದಾಯದಂತೆ ಗ್ರಾಮದ ಮುಖ್ಯದ್ವಾರದ ಮುಂದೆ ಗ್ರಾಮಸ್ಥರು ತಳಿರು ತೋರಣಗಳಿಂದ ಸಿಂಗರಿಸಿ, ಗ್ರಾಮದ ರಾಮದೇವರಗುಡಿಯಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.