Gauribidanur : ಸಾರ್ವಜನಿಕರ ಕೆಲಸ ಮಾಡಿಕೊಡಲು ಸರ್ಕಾರಿ ನೌಕರರು ಅಥವಾ ಸಿಬ್ಬಂದಿ ವಿಳಂಬ ಮಾಡಬಾರದು. ಸರ್ಕಾರ ನಿಗದಿಪಡಿಸಿದ ಶುಲ್ಕ ಹೂರತುಪಡಿಸಿ ಲಂಚಕ್ಕೆ ಅಥವಾ ವಸ್ತುವಿನ ರೂಪದ ಬೇಡಿಕೆಗಳನ್ನು ಇಟ್ಟರೆ ಅಂತಹವರ ಬಗ್ಗೆ ಎಸಿಬಿಗೆ ಸಾರ್ವಜನಿಕರು ದೂರು ನೀಡಿ ಎಂದು ACB ಡಿವೈಎಸ್ಪಿ ಪ್ರವೀಣ್ ತಿಳಿಸಿದರು.
ಗೌರಿಬಿದನೂರು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ತಡೆಗಟ್ಟಿ ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ಒದಗಿಸಬೇಕು ಎಂಬ ಉದ್ದೇಶದಿಂದ ಭ್ರಷ್ಟಾಚಾರ ನಿಗ್ರಹ ದಳವನ್ನು ಸರ್ಕಾರ ಸ್ಥಾಪಿಸಿದೆ. ಕೆಲಸಕ್ಕಾಗಿ ಅಧಿಕಾರಿಗಳು ಹಣ ಕೇಳಿದಲ್ಲಿ ಅಂತವರ ವಿರುದ್ಧ ಧೈರ್ಯದಿಂದ ದೂರು ನೀಡಬೇಕು. ದೂರುದಾರರ ಹೆಸರು, ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಸಿಬಿ ಪೊಲೀಸ್ ಅಧಿಕಾರಿ ರವಿಕುಮಾರ್, ಹರೀಶ್, ಶಿರಸ್ತೇದಾರ್ ರವಿಕುಮಾರ್, ಗ್ರೇಡ್ 2 ತಹಶೀಲ್ದಾರ್ ವೆಂಕಟರಮಣರಾವ್ ಉಪಸ್ಥಿತರಿದ್ದರು.