Gauribidanur : ಗೌರಿಬಿದನೂರು ನಗರದ ಎಚ್.ಎನ್.ಕಲಾಭವನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ವತಿಯಿಂದ ನಡೆದ ಕೋವಿಡ್ ( Covid-19 ) ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಚೆಕ್ ವಿತರಣೆ ಮತ್ತು ಅತಿವೃಷ್ಟಿ/ಪ್ರವಾಹ ( Floods )ದಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ಧನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ” ಸರ್ಕಾರದಿಂದ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣ ಸಂದಾಯ ಮಾಡುವ ವ್ಯವಸ್ಥೆ ಪಾರದರ್ಶಕವಾಗಿದ್ದು ಹಿಂದಿನ ವ್ಯವಸ್ಥೆಯಿಂದ ಆಗುತ್ತಿದ್ದ ಲೋಪದೋಷಗಳಿಗೆ ಕಡಿವಾಣ ಹಾಕಿದೆ. ಅಕಾಲಿಕ ಮಳೆಯಿಂದ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿದ್ದು ಬೆಳೆ ಹಾನಿ ಸಹ ಆಗಿದೆ. ಜಿಲ್ಲೆಯಾದ್ಯಂತ ₹29.35 ಕೋಟಿ ಪ್ರತ್ಯೇಕವಾಗಿ ವಿವಿಧ ಬೆಳೆಗಳ ಹಾನಿಗೊಳಗಾದ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಿರುತ್ತದೆ. ಗೌರಿಬಿದನೂರು ತಾಲ್ಲೂಕಿನಲ್ಲಿ 33 ಬಿಪಿಎಲ್ ಕುಟುಂಬಸ್ಥರು ಕೋವಿಡ್ ನಿಂದ ಮೃತಪಟ್ಟಿದ್ದು ಅವರ ಕುಟುಂಬಸ್ಥರಿಗೆ ₹ 1.50 ಲಕ್ಷ ಮತ್ತು 15 ಮಂದಿ ಎಪಿಎಲ್ ಕಾರ್ಡುದಾರರು ಮೃತಪಟ್ಟಿದ್ದು ಅವರ ಕುಟುಂಬಸ್ಥರಿಗೆ ₹50 ಸಾವಿರ ಪರಿಹಾರ ಧನ ನೀಡಲಾಗುವುದು. ಸರ್ಕಾರದಿಂದ ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಯಾದ ಮನೆಗಳಿಗೆ ಎ, ಬಿ, ಸಿ ವರ್ಗಗಳಲ್ಲಿ ಕಂತುಗಳಲ್ಲಿ ಪರಿಹಾರ ನೀಡಲಾಗುವುದು.” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ತಹಶೀಲ್ದಾರ್ ಎಚ್.ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಆಯುಕ್ತರಾದ ವಿ.ಸತ್ಯನಾರಾಯಣ, ಇಒ ಎನ್.ಮುನಿರಾಜು, ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ, ನಗರಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಸದಸ್ಯರು, ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಫಲಾನುಭವಿಗಳು ಭಾಗವಹಿಸಿದ್ದರು.