Gauribidanur : ಗೌರಿಬಿದನೂರು ತಾಲ್ಲೂಕಿನ ತೊಂಡೇಭಾವಿ (Thondebavi) ಹೋಬಳಿ ಕೇಂದ್ರದಲ್ಲಿ ಭಾನುವಾರ ವೀರಶೈವ ಸೇವಾ ಸಮಿತಿ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ (Renukacharya Yugamanotsava) ಹಾಗೂ ಬಸವ ಜಯಂತಿ (Basava Jayanthi) ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ “ವೀರಶೈವ ಲಿಂಗಾಯಿತ ಧರ್ಮ ಸನಾತನ ಧರ್ಮವಾಗಿದೆ. ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿದಾಗ ಮಾತ್ರ ಅವರ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಜಗದ್ಗುರು ರೇಣುಕಾಚಾರ್ಯರು ಮಾನವನ ದಾನವ ಗುಣಗಳನ್ನು ದಹಿಸಿ ಆತನನ್ನು ಮಹಾದೇವನನ್ನಾಗಿಸುವ ಅಪೂರ್ವ ಸಿದ್ಧಾಂತವನ್ನು ನೀಡಿದವರು. ಜೀವಿ ಶಿವನಾಗುವ, ಮಾನವ ಮಹಾದೇವನಾಗುವ, ಅಂಗ ಲಿಂಗವಾಗುವ ಅದ್ಭುತ ಸಿದ್ಧಾಂತವನ್ನು ಜಗತ್ತಿಗೆ ಬೋಧಿಸಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹೇಶ್ ಎಸ್.ಪತ್ರಿ, ವೀರಶೈವ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಟಿ.ಎಂ.ಚಿಕ್ಕಣ್ಣ, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಪ್ರಭುದೇವ್ ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್, ಅಖಿಲ ಭಾರತ ವೀರಶೈವ ಸಮುದಾಯದ ತಾಲ್ಲೂಕು ಅಧ್ಯಕ್ಷ ಮಹೇಂದ್ರ, ಜಿ.ಆರ್.ನವೀನ್, ಹಿರೇ ಬಿದನೂರು ರಾಜಣ್ಣ, ಚಂದ್ರಶೇಖರ್, ಡಾ.ಸಿ.ನಾಗರತ್ನ ಮತ್ತಿತರರು ಭಾಗವಹಿಸಿದ್ದರು.
